ಕಲ್ಲಾಪು: ರಸ್ತೆ ಅಪಘಾತಕ್ಕೆ ಉಳ್ಳಾಲದ ಯುವಕ ಬಲಿ
ಮಂಗಳೂರು, ಫೆ.25: ರಾ.ಹೆ.66ರ ಕಲ್ಲಾಪು ಎಂಬಲ್ಲಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಉರುಳಿದ ಪರಿಣಾಮ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಇಂದು ಮುಂಜಾನೆ ನಡೆದಿದೆ. ಈ ದುರ್ಘಟನೆಯಲ್ಲಿ ಸಹಸವಾರ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳ್ಳಾಲ ಅಕ್ಕರೆಕರೆ ನಿವಾಸಿ ಮಯ್ಯದ್ದಿ ಎಂಬವರ ಪುತ್ರ ಸಂಶುದ್ದೀನ್ (21) ಮೃತಪಟ್ಟ ಸವಾರ. ಇನ್ನೊಬ್ಬ ಪುತ್ರ ವಾಸಿಂ (19) ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಯ್ಯದ್ದಿ ಬಂದರ್ ದಕ್ಕೆಯಲ್ಲಿ ಹೊಟೇಲ್ ನಡೆಸುತ್ತಿದ್ದಾರೆ. ಮೃತ ಸಂಶುದ್ದೀನ್ ದಕ್ಕೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಗಾಯಾಳು ವಾಸಿಂ ತಂದೆಯ ಹೊಟೇಲಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹೋದರರಾದ ಸಂಶುದ್ದೀನ್ ಮತ್ತು ವಾಸಿಂ ಪ್ರತೀ ದಿನ ದ್ವಿಚಕ್ರ ವಾಹನದಲ್ಲಿ ಉಳ್ಳಾಲ ಅಕ್ಕರೆಕರೆಯಿಂದ ಬಂದರ್ ದಕ್ಕೆಗೆ ಜೊತೆಯಾಗಿ ತೆರಳುತ್ತಿದ್ದರು.
ಎಂದಿನಂತೆ ಶನಿವಾರ ಮುಂಜಾನೆ ಕೂಡ ಸಹೋದರರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಕಲ್ಲಾಪು ತಲುಪಿದಾಗ ದ್ವಿಚಕ್ರ ವಾಹನ ಸ್ಕಿಡ್ಡಾಗಿ ಸವಾರನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ. ಸವಾರ ಸಂಶುದ್ದೀನ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಸಹಸವಾರ ವಾಸಿಂ ಗಂಭೀರ ಗಾಯಗೊಂಡಿದ್ದಾರೆ.