ಮಾಡದ ತಪ್ಪಿಗೆ ಏಳು ವರ್ಷ ಕಾಲ ಜೈಲುವಾಸ ಅನುಭವಿಸಿದ ಮೂವರು ಕಾಶ್ಮೀರಿ ಯುವಕರು

Update: 2017-02-25 04:05 GMT

ಹೊಸದಿಲ್ಲಿ, ಫೆ.25: ದಿಲ್ಲಿ ಸರಣಿ ಸ್ಫೋಟದ ಸಂಬಂಧ ಬಂಧಿಸಲಾಗಿರುವ ಮೂವರು ಕಾಶ್ಮೀರಿಗಳ ಪಾತ್ರ ಈ ಪ್ರಕರಣದಲ್ಲಿ ಇಲ್ಲ ಎಂದು ದಿಲ್ಲಿ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವಿಭಾಗಕ್ಕೆ 2009ರಲ್ಲೇ ದೃಢಪಟ್ಟರೂ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ, ಈ ಅಮಾಯಕರು ಅನಗತ್ಯವಾಗಿ ಏಳು ವರ್ಷಕಾಲ ಜೈಲಿನಲ್ಲೇ ಕಳೆದಿರುವುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ಬಯಲಿಗೆಳೆದಿದೆ.

2005ರ ಅಕ್ಟೋಬರ್ 20ರಂದು ಅಂದರೆ ದೀಪಾವಳಿಯ ಮೂರು ದಿನಕ್ಕೆ ಮುನ್ನ ದಿಲ್ಲಿಯ ಸರೋಜಿನಿ ನಗರ, ಗೋವಿಂದಪುರಿ ಹಾಗೂ ಪಹರ್‌ಗಂಜ್‌ನಲ್ಲಿ ಮೂರು ಸ್ಫೋಟಗಳು ಸಂಭವಿಸಿ 60 ಮಂದಿ ಸಾವಿಗೀಡಾಗಿದ್ದರು.

ಗೃಹ ಇಲಾಖೆಗೂ ಇದು ಖಚಿತವಾಗಿ ತಿಳಿದಿದ್ದರೂ, ಸರ್ಕಾರ ಪ್ರಕರಣದ ಮರುತನಿಖೆಗೆ ಅಥವಾ ಅಮಾಯಕರ ಬಿಡುಗಡೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎನ್ನುವುದನ್ನು ಅಧಿಕೃತ ಮೂಲಗಳು ದೃಢಪಡಿಸಿವೆ. ಮುಹಮ್ಮದ್  ರಫೀಕ್ ಶಾ ಹಾಗೂ ಮುಹಮ್ಮದ್ ಹುಸೈನ್ ಫೈಝಲಿ ಅವರನ್ನು ಈ ತಿಂಗಳ ಆರಂಭದಲ್ಲಿ ಎಲ್ಲ ಪ್ರಕರಣಗಳಿಂದ ಆರೋಪಮುಕ್ತಗೊಳಿಸಲಾಗಿತ್ತು. ತಾರೀಕ್ ಧರ್ ಎಂಬ ಮೂರನೆ ಆರೋಪಿ, ಭಯೋತ್ಪಾದಕರಿಗೆ ಬೆಂಬಲ ನೀಡಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾನೆ. ಆದರೆ ಈ ದಾಳಿಯಲ್ಲಿ ಆತನ ಪಾತ್ರ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಆಕ್ಟೋಪಸ್ ಎಂಬ ಭಯೋತ್ಪಾದಕ ನಿಗ್ರಹ ಪಡೆ ಸರಣಿ ಸ್ಫೋಟಗಳ ಬಗ್ಗೆ 2009ರ ಮಾರ್ಚ್‌ನಲ್ಲಿ ವರದಿ ನೀಡಿತ್ತು. ವಿಧಿವಿಜ್ಞಾನ ಮಾಹಿತಿ ಹಾಗೂ ಸಾಕ್ಷಿಗಳನ್ನು ವಿಚಾರಣೆಗೆ ಗುರಿಪಡಿಸಿದಾಗ, ಈ ಸರಣಿ ದಾಳಿಗಳನ್ನು ಇಂಡಿಯನ್ ಮುಜಾಹಿದ್ದೀನ್ ಸಂಸ್ಥೆ ನಡೆಸಿದೆಯೇ ವಿನಃ ಬಂಧಿತರಾಗಿರುವ ಆರೋಪಿಗಳು ಎಸಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿತ್ತು, ಆದರೆ ಅಂದಿನ ಗೃಹಸಚಿವರಾಗಿದ್ದ ಪಿ.ಚಿದಂಬರಂ ಅವರು, ಇಂಡಿಯನ್ ಮುಜಾಹಿದ್ದೀನ್ ಹಾಗೂ ಮೂವರು ಆರೋಪಿಗಳು ಹೊಂದಿರುವ ಸಂಬಂಧದ ಬಗ್ಗೆ ವರದಿಯಲ್ಲಿ ಉಲ್ಲೇಖವಿಲ್ಲ ಎಂಬ ಕಾರಣ ನೀಡಿ ವರದಿಯ ಬಗ್ಗೆ ಕ್ರಮ ಕೈಗೊಳ್ಳಲು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News