ಡೊನಾಲ್ಡ್ ಟ್ರಂಪ್ ಮತ್ತೆ ದೇಸಿ ಜಪ!

Update: 2017-02-25 04:10 GMT

ವಾಷಿಂಗ್ಟನ್, ಫೆ.25: ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಭಾರತೀಯ ಟೆಕ್ಕಿಯೊಬ್ಬರನ್ನು ಅಮೆರಿಕನ್ ಪ್ರಜೆ ಹತ್ಯೆ ಮಾಡಿದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದ ಸಂಪ್ರದಾಯವಾದವನ್ನು ಸಮರ್ಥಿಸಿದ್ದಾರೆ.

"ಅಮೆರಿಕನ್ ಉದ್ಯೋಗಿಗಳನ್ನು ನಾನು ಉಳಿಸುತ್ತೇನೆ. ಉದ್ಯೋಗವನ್ನು ಅಮೆರಿಕಕ್ಕೆ ತರುತ್ತೇನೆ ಹಾಗೂ ಬಂದೂಕು ಮಾಲಕತ್ವದ ಹಕ್ಕನ್ನು ರಕ್ಷಿಸುತ್ತೇನೆ" ಎಂದು ಪ್ರಬಲವಾಗಿ ರಾಷ್ಟ್ರೀಯತೆಯನ್ನು ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು.

"ನಾನು ಜಾಗತಿಕ ಪ್ರತಿನಿಧಿ ಅಲ್ಲ. ನಾನು ನನ್ನ ದೇಶದ ಪ್ರತಿನಿಧಿ" ಎಂದು ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್‌ನ ವಾರ್ಷಿಕ ಸಮಾವೇಶದಲ್ಲಿ ಅವರು ಸ್ಪಷ್ಟಪಡಿಸಿದರು. ದೇಶಾದ್ಯಂತ ಚರ್ಚೆಯ ವಸ್ತುವಾಗಿರುವ ಭಾರತೀಯ ಟೆಕ್ಕಿಯ ಹತ್ಯೆ ಪ್ರಕರಣವನ್ನು ಟ್ರಂಪ್ ಎಲ್ಲೂ ಪ್ರಸ್ತಾಪಿಸಲಿಲ್ಲ. ಜತೆಗೆ ವೈಟ್‌ಹೌಸ್ ಕೂಡಾ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಚಿಕಾಗೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಮಂದಿ ಹತ್ಯೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. "ಚಿಕಾಗೊದಲ್ಲಿ  ನಿನ್ನೆ ಏಳು ಮಂದಿಯ ಹತ್ಯೆಯಾಗಿದೆ. ಅಲ್ಲಿ ನಡೆಯುತ್ತಿರುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಚಿಕಾಗೋಗೆ ನೆರವು ನೀಡಬೇಕಾಗಿದೆ" ಎಂದು ಟ್ರಂಪ್ ಟ್ವೀಟಿಸಿದ್ದರು.

ಆದರೆ ದಿಲ್ಲಿಯಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿಯು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ, ನೆರವಿನ ಭರವಸೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News