×
Ad

ಪುತ್ತೂರಿನಲ್ಲಿ ಬಂದ್‌ಗೆ ಸಾಧಾರಣ ಪ್ರತಿಕ್ರಿಯೆ

Update: 2017-02-25 12:48 IST

ಪುತ್ತೂರು, ಫೆ.25: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಿಲ್ಲೆಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಸಂಘ ಪರಿವಾರ ಸಂಘಟನೆಗಳು ನೀಡಿದ ಬಂದ್ ಕರೆಗೆ ಪುತ್ತೂರಿನಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗಿನ ವೇಳೆಯಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿದ್ದರೂ 11 ಗಂಟೆಯ ಬಳಿಕ ಕೆಲವು ಅಂಗಡಿಗಳು ತೆರೆದುಕೊಂಡವು. ಖಾಸಗಿ ಬಸ್ಸುಗಳು ಓಡಾಟ ಸ್ಥಗಿತಗೊಳಿಸಿದ್ದರೂ ಕೆಎಸ್ಸಾರ್ಟಿಸಿ ಬಸ್ಸುಗಳು ಎಂದಿನಂತೆ ಓಡಾಟ ನಡೆಸುತ್ತಿವೆ.

ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ಎಂಬಲ್ಲಿ ಕೆಸ್ಸಾರ್ಟಿಸಿ ಬಸ್ಸೊಂದಕ್ಕೆ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ಬೈಪಾಸ್‌ನಲ್ಲಿ ಮುಂಜಾನೆ ವೇಳೆಯಲ್ಲಿ ರಸ್ತೆಯಲ್ಲಿ ಟಯರ್ ಉರಿಸಲಾಗಿತ್ತು. ಪೊಲೀಸರು ಟಯರ್ ಬೆಂಕಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಗರದ ಎರಡು ಖಾಸಗಿ ಕಾಲೇಜುಗಳು ಮಾತ್ರ ರಜೆ ಸಾರಿದ್ದವು. ಉಳಿದಂತೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ತರಗತಿಗಳನ್ನು ನಡೆಸಿವೆ. ಎಲ್ಲಾ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸಿತ್ತು. ನಗರದಲ್ಲಿ ಜನಸಂಚಾರ ಎಂದಿಗಿಂತ ವಿರಳವಾಗಿತ್ತು.

ಬಿಎಂಎಸ್ ಸಂಘಟನೆಯ ಆಟೊರಿಕ್ಷಾ ಹೊರತುಪಡಿಸಿ ಉಳಿದ ಇತರ ಸಂಘಟನೆಗಳ ಆಟೊರಿಕ್ಷಾಗಳು, ಕಾರುಗಳು, ದ್ವಿಚಕ್ರ ವಾಹಗಳು ಓಡಾಟ ನಡೆಸುತ್ತಿವೆ. ನಗರದ ಹೊರ ಪ್ರದೇಶಗಳಾದ ಕುಂಬ್ರ, ತಿಂಗಳಾಡಿ, ಪಾಣಾಜೆ, ಸವಣೂರು ಇನ್ನಿತರ ಕಡೆಗಳಲ್ಲಿ ಕೆಲವೊಂದು ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಬಹುತೇಕ ಅಂಗಡಿಗಳು ಎಂದಿನಂತೆ ತೆರದುಕೊಂಡಿವೆ. ಪೊಲೀಸರು ಎಲ್ಲಾ ಕಡೆಗಳಲ್ಲಿ ಬಿಗು ಬಂದೋಬಸ್ತು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News