ವಾರ್ತಾಭಾರತಿ ಮತೀಯ ಶಕ್ತಿಗಳಿಗೆ ಸಿಂಹಸ್ವಪ್ನ: ಪಿಣರಾಯಿ ಬಣ್ಣನೆ

Update: 2017-02-25 14:01 GMT

ಮಂಗಳೂರು, ಫೆ.25: ನಾಡಿನ ಬಡವರ, ಶೋಷಿತರ ಪರವಾಗಿರುವ ‘ವಾರ್ತಾಭಾರತಿ’ ಇತರ ಮಾಧ್ಯಮಗಳಿಗಿಂತ ಭಿನ್ನವಾಗಿ ನಿಂತಿದೆ. ಕಳೆದ ಹಲವು ವರ್ಷಗಳಿಂದ ತನ್ನ ಜಾತ್ಯತೀತ ನಿಲುವುಗಳಿಂದ ‘ವಾರ್ತಾಭಾರತಿ’ಯು ಮತೀಯ ಶಕ್ತಿಗಳಿಗೆ ಸಿಂಹಸ್ವಪ್ನವಾಗಿ ಬೆಳೆದಿರುವುದು ಅದರ ಹೆಗ್ಗಳಿಕೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

‘ವಾರ್ತಾಭಾರತಿ’ ದೈನಿಕದ ನೂತನ ಕಚೇರಿ ಸಂಕೀರ್ಣ ‘ಮಾಧ್ಯಮ ಕೇಂದ್ರ’ ನಿರ್ಮಾಣಕ್ಕೆ ನಗರದ ಅತ್ತಾವರ ರಸ್ತೆಯ ಮಸ್ಜಿದುನ್ನೂರ್ ಬಳಿಯ ಐಎಂಎ ಸಭಾಂಗಣದಲ್ಲಿ ಇಂದು ಪೂರ್ವಾಹ್ನ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ನಾಡಿನ ಬಹುತೇಕ ಮಾಧ್ಯಮಗಳು ಕೆಲವು ಶಕ್ತಿಗಳ ನಿಯಂತ್ರಣಕ್ಕೆ ಒಳಗಾಗಿ, ಸಿದ್ಧಾಂತಕ್ಕೆ ಕಟ್ಟುಬಿದ್ದು ಬಂಡವಾಳಶಾಹಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಕಾಲಘಟ್ಟದಲ್ಲಿ ವಾರ್ತಾಭಾರತಿ ಅವೆಲ್ಲವುಗಳನ್ನು ಕಡೆಗಣಿಸಿ ಬಡವರ, ಶೋಷಿತರ ಪರವಾಗಿ ನಿಂತಿರುವುದು ಶ್ಲಾಘನೀಯ ಎಂದು ಪಿಣರಾಯಿ ಅವರು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ, ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಮಾಜಿ ಸಚಿವ, ಸಂಸದ ಪಿ. ಕರುಣಾಕರನ್, ಶಾಸಕ ಕೆ.ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ರಾಜಗೋಪಾಲನ್, ಮಾಜಿ ಶಾಸಕ ಶ್ರೀರಾಮ ರೆಡ್ಡಿ, ಇನ್‌ಲ್ಯಾಂಡ್ ಬಿಲ್ಡರ್ಸ್‌ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಗೋವಾದ ಕ್ವಾಲಿಟಿ ಎಕ್ಸ್‌ಪೋರ್ಟ್ಸ್ ಇದರ ಆಡಳಿತ ನಿರ್ದೇಶಕ ಹಾಗೂ ಪಾಲುದಾರ ವೌಲಾನ ಇಬ್ರಾಹೀಂ ಗೋವಾ, ಆಝಾದ್ ಹಾರ್ಡ್ ವೇರ್‌ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಸದಸ್ಯ ನವೀನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News