×
Ad

‘ಸಂವಿಧಾನ’ವನ್ನು ಗೌರವಿಸದವರಿಗೆ ಚಪ್ಪಲಿಯಿಂದ ಹೊಡೆಯಬೇಕು: ಸಚಿವ ಖಾದರ್

Update: 2017-02-25 16:06 IST

ಮಂಗಳೂರು, ಫೆ.25: ಕರಾವಳಿ ಸೌಹಾರ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ವಿರೋಧಿಸುವ ಶಕ್ತಿಗಳು ಪಿಣರಾಯಿ ವಿಜಯನ್‌ರ ಚಪ್ಪಲಿಗೂ ಸಮಾನರಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ನೀಡಿದ ‘ಸಂವಿಧಾನ’ವನ್ನು ಗೌರವಿಸದ ಈ ಜನರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಶನಿವಾರ ನಡೆದ ‘ವಾರ್ತಾಭಾರತಿ’ ಕನ್ನಡ ದೈನಿಕದ ನೂತನ ಕಚೇರಿ ಸಂಕೀರ್ಣ ‘ಮಾಧ್ಯಮ ಕೇಂದ್ರ’ದ ಚಾಲನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಒಂದು ರಾಜ್ಯದ ಪ್ರಜಾಸತ್ತಾತ್ಮಕವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಾಯಕರ ಮಂಗಳೂರು ಭೇಟಿಯನ್ನು ವಿರೋಧಿಸುವುದು ‘ಅತಿಥಿ ದೇವೋಭವ’ ಎಂಬ ದೇಶದ ಸಂಸ್ಕೃತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಅಂತಹ ಶಕ್ತಿಗಳನ್ನು ಹೊರಗಿಡುವ ಮೂಲಕ ಜಾತ್ಯತೀತ ಶಕ್ತಿಯನ್ನು ಬಲಪಡಿಸಬೇಕು ಎಂದು ಖಾದರ್ ಹೇಳಿದರು.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಬಿ.ರಮಾನಾಥ ರೈ, ಶಾಸಕರಾದ ಕೆ. ಅಭಯಚಂದ್ರ ಜೈನ್, ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವಾ, ಕಾಸರಗೋಡು ಸಂಸದ ಪಿ.ಕರುಣಾಕರನ್, ತ್ರಿಕ್ಕರಿಪುರದ ಶಾಸಕ ರಾಜಗೋಪಾಲ್, ಮೇಯರ್ ಹರಿನಾಥ್, ಮಾಜಿ ಶಾಸಕ ಶ್ರೀರಾಮ ರೆಡ್ಡಿ, ಇನ್‌ಲ್ಯಾಂಡ್ ಬಿಲ್ಡರ್ಸ್‌ನ ಅಧ್ಯಕ್ಷ ಹಾಗು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಗೋವಾದ ಕ್ವಾಲಿಟಿ ಎಕ್ಸ್‌ಪೋರ್ಟ್‌ನ ಆಡಳಿತ ನಿರ್ದೇಶಕ ವೌಲಾನಾ ಇಬ್ರಾಹೀಂ ಗೋವಾ, ಆಝಾದ್ ಹಾರ್ಡ್‌ವೇರ್‌ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕಾರ್ಪೊರೇಟರ್ ನವೀನ್ ಡಿಸೋಜ ಉಪಸ್ಥಿತರಿದ್ದರು.

‘ವಾರ್ತಾಭಾರತಿ’ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಕಮ್ಯನಿಕೇಶನ್ಸ್ ಲಿ.ನ ನಿರ್ದೇಶಕ ಯಾಸೀನ್ ಮಲ್ಪೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ‘ವಾರ್ತಾಭಾರತಿ’ಯ ಮಂಗಳೂರು ಬ್ಯೂರೋ ಮುಖ್ಯಸ್ಥ ಬಿ.ಎನ್.ಪುಷ್ಪರಾಜ್ ವಂದಿಸಿದರು. ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News