×
Ad

ಉಳ್ಳಾಲ: ಅಸೈಗೋಳಿ ಬಳಿ ಬಸ್‌ಗೆ ಕಲ್ಲು ತೂರಾಟ

Update: 2017-02-25 16:33 IST

ಉಳ್ಳಾಲ, ಫೆ.25: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಂಗಳೂರು ಭೇಟಿಯನ್ನು ವಿರೋಧಿಸಿ ಸಂಘ ಪರಿವಾರ ಹಾಗೂ ಬಿಜೆಪಿ ಕರೆಕೊಟ್ಟಿದ್ದ ದ.ಕ.ಬಂದ್‌ಗೆ ಉಳ್ಳಾಲ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶನಿವಾರ ಬೆಳಗ್ಗೆ ಸರಕಾರಿ ಬಸ್‌ಗಳಿಗೆ ಕಲ್ಲು ತೂರಾಟ ಹಾಗೂ ಕೆಲವು ಭಾಗಗಳಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಸಂಚಾರಕ್ಕೆ ತಡೆಯೊಡ್ಡಲು ಪ್ರಯತ್ನಿಸಿದ್ದರು.

ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತಲಪಾಡಿ ಭಾಗದಲ್ಲಿ ಎರಡು ಬಸ್‌ಗಳಿಗೆ ಕಲ್ಲು ಬಿದ್ದು ಹಾನಿಯಾಗಿದೆ. ಅಲ್ಲದೆ ಅಲ್ಲದೆ ಅಸೈಗೋಳಿ ಬಳಿಯೂ ಮಂಗಳೂರಿನಿಂದ ಮುಡಿಪುವಿಗೆ ಸಂಚರಿಸುವ ನರ್ಮ್ ಸರಕಾರಿ ಬಸ್‌ಗೆ ದುಷ್ಕರ್ಮಿಗಳು ಪರಾರಿಯಾಗಿದ್ದರು. 

ಬಳಿಕ ಕೆಲಹೊತ್ತು ಬಸ್ಸನ್ನು ಕೊಣಾಜೆ ಪೊಲೀಸ್ ಠಾಣೆಯೆದುರು ನಿಲ್ಲಿಸಲಾಗಿತ್ತು. ಬಳಿಕ ಪ್ರಯಾಣಿಕರ ಪರದಾಟವನ್ನು ಕಂಡು ಬಸ್ ಪ್ರಯಾಣ ಮುಂದುವರಿಸಲು ಅನುವು ಮಾಡಿಕೊಟ್ಟರು.

ಅಲ್ಲದೆ ಕೊಣಾಜೆ ಠಾಣಾ ವ್ಯಾಪ್ತಿಯ ಪಾವೂರು ಬಳಿ ದುಷ್ಕರ್ಮಿಗಳು ರಸ್ತೆ ಮದ್ಯೆ ಟಯರ್‌ಗೆ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಆಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಉಳ್ಳಾಲ, ದೇರಳಕಟ್ಟೆ, ತಲಪಾಡಿ, ಕೊಣಾಜೆ ಮುಡಿಪು ಭಾಗದಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದರೂ ಕಾಸರಗೋಡು ಸಾರಿಗೆ ಬಸ್ ಹೊರತು ಪಡಿಸಿ ಇತೆರೆಡೆಗಳಲ್ಲಿ ಸರಕಾರಿ ಬಸ್‌ಗಳು ಪೊಲೀಸರ ರಕ್ಷಣೆಯೊಂದಿಗೆ ಓಡಾಟವನ್ನು ಮುಂದುವರಿಸಿದ್ದವು. ಹಾಗೆಯೇ ಇತರ ವಾಹನಗಳು ಎಂದಿನಂತೆಯೇ ಓಡಾಟವನ್ನು ನಡೆಸಿತ್ತು.

ಉಳ್ಳಾಲ ನಗರ ವ್ತಾಪ್ತಿಯಲ್ಲಿ ಹಾಗೂ ತೊಕ್ಕೊಟ್ಟುವಿನಲ್ಲಿಯೂ ಹೆಚ್ಚಿನ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು. ಕುತ್ತಾರು ಹಾಗೂ ದೇರಳಕಟ್ಟೆಯಲ್ಲಿ ಕೆಲವೊಂದು ಅಂಗಡಿಗಳು ಮುಚ್ಚಿದ್ದರೆ ಅಸೈಗೋಳಿ, ಮುಡಿಪುವಿನಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿದ್ದವು.

  ಶುಕ್ರವಾರ ರಾತ್ರಿಯಿಂದಲೇ ದುಷ್ಕರ್ಮಿಗಳು ತಲಪಾಡಿ ಗಡಿ ಭಾಗದಲ್ಲಿ ಹಾಗೂ ಕೋಟೆಕಾರ್‌ನಲಲ್ಲಿ ಕಾಸರಗೋಡಿಗೆ ಸಂಚರಿಸುವ ಕೇರಳ ಸಾರಿಗೆ ಬಸ್‌ಗೆ ಕಲ್ಲು ಎಸೆದು ಹಾನಿಗೊಳಿಸಿದ್ದರು. 

 ಕೆಲವೊಂದೆಡೆ ಬಸ್ ಬಂದ್ ಆಗಿದ್ದ ಪರಿಣಾಮ ವಿದ್ಯಾರ್ಥಿಗಳು, ಯುವಕರು ರಜೆಯ ಮಜಾದೊಂದಿಗೆ ಮೈದಾನಗಳಲ್ಲಿ ಬೆಳಿಗ್ಗೆಯಿಂದಲೇ ಆಟದಲ್ಲಿ ನಿರತರಾಗಿದ್ದ ದೃಶ್ಯ ಕಂಡು ಬರುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News