ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಆರೆಸ್ಸೆಸ್‌ನಿಂದ ದೇಶಪ್ರೇಮದ ಪಾಠ: ಪಿಣರಾಯಿ ವಿಜಯನ್ ವ್ಯಂಗ್ಯ

Update: 2017-02-25 14:09 GMT

ಮಂಗಳೂರು, ಫೆ.25:  1925ರಲ್ಲಿ ಆರೆಸ್ಸೆಸ್‌ ಸ್ಥಾಪನೆಯಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕೆ ಮೋಸ ಮಾಡುವ ಪಾತ್ರ ವಹಿಸಿದ್ದಾರೆ. ಎಲ್ಲರೂ ಒಂದಾಗಬೇಕು ಎಂದು ಬಯಸಿದ್ದ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದ. ಗಾಂಧೀಜಿ ಹತ್ಯೆಯಾದಾಗ ಆರೆಸ್ಸೆಸ್‌ ಸಿಹಿ ತಿಂಡಿ ಹಂಚಿದರು. ಅಂತಹವರಿಂದ ನಾವು ದೇಶಪ್ರೇಮದ ಪಾಠ ಕಲಿಯಬೇಕಾಗಿದೆ ಎಂದು ಪಿಣರಾಯ್ ವಿಜಯನ್ ವ್ಯಂಗ್ಯವಾಡಿದರು.

 ನೆಹರೂ ಮೈದಾನದಲ್ಲಿ ನಡೆದ ಸೌಹಾರ್ದ ರ‍್ಯಾಲಿಯಲ್ಲಿ  ಭಾಗವಹಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿದರು.


ಆರೆಸ್ಸೆಸ್‌ ಹಿಟ್ಲರ್ ಫ್ಯಾಸಿಸಂನಿಂದ ಪ್ರಭಾವಿತ: 

ಆರೆಸ್ಸೆಸ್ ಹಿಟ್ಲರ್ ಫ್ಯಾಸಿಸಂನಿಂದ ಪ್ರಭಾವಿತವಾಗಿದೆ. ಆರೆಸ್ಸೆಸ್‌ಗೆ ರಾಜಕೀಯ ತತ್ವಶಾಸ್ತ್ರ ಇರಲಿಲ್ಲ. ಇದಕ್ಕಾಗಿ ಇಟಲಿಯ ಮುಸೋಲಿನಿಯನ್ನು ಭೇಟಿಯಾಗಿ ಅವರ ಸಂಘಟನೆಯಲ್ಲಿ ಭಾಗಿಯಾಗಿ ಅಲ್ಲಿನ ಸಂಘಟನಾ ನೀತಿಯನ್ನು ನಮ್ಮ ದೇಶದಲ್ಲಿ ಅಳವಡಿಸಿಕೊಂಡಿದ್ದಾರೆ. ಮತ್ತೆ ತತ್ವಶಾಸ್ತ್ರ ಹುಡುಕುತ್ತ ಜರ್ಮನಿ ಸೇರಿದರು. ಹಿಟ್ಲರ್ ತತ್ವಶಾಸ್ತ್ರ ಅಭ್ಯಾಸ ಮಾಡಿದರು. ಅಲ್ಪಸಂಖ್ಯಾತರನ್ನು ಇಲ್ಲವಾಗಿಸುವುದೇ ಹಿಟ್ಲರ್ ತತ್ವ.

ಅದೇ ತತ್ವವನ್ನು ಆರೆಸ್ಸೆಸ್ ತನ್ನ ತತ್ವವನ್ನಾಗಿ ಬೆಳೆಸಿಕೊಂಡಿದೆ. ಭಾರತದಲ್ಲಿ ಕೋಮುಗಲಭೆ ಹಬ್ಬುವುದಕ್ಕೆ ಆರೆಸ್ಸೆಸ್ ಪಾತ್ರ ವಹಿಸಿದೆ. ದೇಶ ಸ್ವಾತಂತ್ರ‍್ಯ ಪಡೆದಾಗಿನಿಂದ ಇಲ್ಲಿಯವರೆಗೂ ಅವರು ಮಾಡಿರುವ ಕೋಮುಗಲಭೆಗೆ ಲೆಕ್ಕವೆ ಇಲ್ಲ. ಭಾರತದ ಧರ್ಮ ನಿರಪೇಕ್ಷತೆಯನ್ನು ಅವರು ಒಪ್ಪುವುದಿಲ್ಲ. ೪೭ರ ಆರ್ಗನೈಝರ್ ಪತ್ರಿಕೆಯಲ್ಲಿ ದೇಶದ ಬಾವುಟಕ್ಕೂ ಭಾರತಕ್ಕೂ ಸಂಬಂಧವಿಲ್ಲ ಎಂಬ ಲೇಖನ ಬರೆದಿದ್ದಾರೆ.  ಇಂಡಿಯಾ ಪದ ಉಪಯೋಗಿಸಬಾರದು, ದೇಶದ  ಭಾವುಟ ಸರಿಯಿಲ್ಲ ಎಂದು ಆರೆಸ್ಸೆಸ್‌ನ ಪತ್ರಿಕೆಯಲ್ಲಿ ಬಂದಿತ್ತು ಎಂದು ಹೇಳಿದರು.        

ಎಂ.ಎಂ. ಕಲ್ಬುರ್ಗಿ ಅಭಿಪ್ರಾಯ ಹೇಳಿದಕ್ಕೆ ಕೊಲೆ ಮಾಡಿದ್ದಾರೆ: 

ಭಾಷಣದಲ್ಲಿ ಕನ್ನಡಿಗ ಬರಹಗಾರರ ಮೇಲೆ ನಡೆದ ವೈಚಾರಿಕ ದಾಳಿ ಪ್ರಸ್ತಾಪಿಸಿದ ವಿಜಯನ್, ಅಸಹಿಷ್ಣುತೆ ಒಪ್ಪದ ಮಹಾನ್ ಬರಹಗಾರರನ್ನು ಕೊಂದರು. ಬರೆದರೆ ಬೆರಳು ಕತ್ತರಿಸುತ್ತೇವೆ, ಅತ್ಯಾಚಾರ ನಡೆಸುವುದಾಗಿ ಬೆದರಿಸುತ್ತಿದ್ದಾರೆ. ಇದು ಅವರ ಸಂಸ್ಕೃತಿ ಆರೆಸ್ಸೆಸ್ ಇತರರ ಅಭಿಪ್ರಾಯ ಒಪ್ಪುವುದಿಲ್ಲ. ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಎಂ.ಎಂ. ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿದ್ದಾರೆ.

ಕನ್ನಡದ ಭಗವಾನ್, ಜ್ಞಾನಪೀಠ ಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ , ಕನ್ನಡ ಕವಿ ಹುಚ್ಚಂಗಿ ಪ್ರಸಾದ್, ಚೇತನ ತೀರ್ಥಹಳ್ಳಿ ಅವರು  ಅಭಿಪ್ರಾಯ ವ್ಯಕ್ತಪಡಿಸಿದಕ್ಕೆ ಅವರಿಗೆ ಬೆದರಿಕೆ ಹಾಕಿದರು. ಯು ಆರ್ ಅನಂತಮೂರ್ತಿ ಅವರಿಗೆ ಪಾಕಿಸ್ತಾನ ಟಿಕೇಟ್ ಕಳುಹಿಸಿಕೊಟ್ಟರು. ಭಾರತ ಆರೆಸ್ಸೆಸ್‌ನ ಸೊತ್ತು ಅಲ್ಲ ಎಂದು ಹೇಳಿದರು.

ಪ್ರತಾಪ್ ಪೂಜಾರಿ ಹತ್ಯೆ ಮಾಡಿದವರಿಂದಲೇ ಇಂದು ಬಂದ್ ಗೆ ಕರೆ : 

ಕರಾವಳಿ ಜಿಲ್ಲೆಯಲ್ಲಿ ಸಂಘಪರಿವಾರ ಹಲವರ ಹತ್ಯೆ ಮಾಡಿದೆ. ಪ್ರತಾಪ್ ಪೂಜಾರಿ ಹತ್ಯೆ ಮಾಡಿದವರು ಇಂದು ಬಂದ್ ಗೆ ಕರೆ ಕೊಟ್ಟಿದ್ದಾರೆ. ವಿನಾಯಕ ಬಾಳಿಗ ನನ್ನು ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಹತ್ಯೆ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಪಾತ್ರ ದ ಬಗ್ಗೆ ಯು ಚರ್ಚೆಯಾಗಿತ್ತು. ಹಿಂದು ಸಂಘಟನೆಯ  ಪ್ರವೀಣ್ ಪೂಜಾರಿಯನ್ನು ಕೊಂದರು ಎಂದು ಹೇಳಿದರು.

 ಕೇಂದ್ರಕ್ಕೆ ಆರೆಸ್ಸೆಸ್‌ನಿಂದ ಮಾರ್ಗದರ್ಶನ:

ಕೇಂದ್ರದ ಆಡಳಿತ ದೇಶಕ್ಕೆ ಸವಾಲಾಗುತ್ತಿದೆ. ಅದಕ್ಕೆ ಮಾರ್ಗದರ್ಶನ ನೀಡುತ್ತಿರುವ ಆರೆಸ್ಸೆಸ್ ಕೋಮು ಸೌಹಾರ್ದತೆ ಕೆರಳಿಸಿ ನಾಗರಿಕರಿಗೆ ಸವಾಲಿನ ಪರಿಸ್ಥಿತಿ ಎದುರಿಸಲು  ಕಾರಣವಾಗಿದೆ. ಆರೆಸ್ಸೆಸ್ ದೇಶದ ಜನತೆ ಒಂದಾಗಲು ಬಯಸಿಲ್ಲ. ಜನರಲ್ಲಿ ಭಿನ್ನತೆ ಸೃಷ್ಟಿಸುವುದೇ ಅದರ ಗುರಿಯಾಗಿದೆ.  ಕೇರಳದಲ್ಲಿ ೨೦೫ ಕಮ್ಯುನಿಸ್ಟ್ ರು ಆರೆಸ್ಸೆಸ್ನಿಂದ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.

ನಾನು ಆರೆಸ್ಸೆಸ್‌ನವರ ಕತ್ತಿ- ಚೂರಿಗಳ ಮಧ್ಯೆ ನಡೆದು ಬಂದವನು: 

ಈಗಿನ ಕೇಂದ್ರ ಗೃಹ ಮಂತ್ರಿ ಸೆಕ್ಯುಲರಿಸಂ ಪದವೇ ಅಪಾಯಕಾರಿ ಎಂದು ಮಾತನಾಡುತ್ತಾರೆ. ಅದೇ ಅವರ ನೀತಿಯಾಗಿದೆ. ಇದು ಪ್ರತಿ ಪ್ರಜೆಯ ದೇಶ. ಪ್ರತಿಯೊಬ್ಬರ ಹಕ್ಕು ಕಾಪಾಡಲು ಧರ್ಮನಿರಪೇಕ್ಷತೆಯ ಒಪ್ಪುವ ಎಲ್ಲ ಶಕ್ತಿಗಳು ಒಗ್ಗೂಡಬೇಕಾಗಿದೆ. ಈ ದೇಶ ಆರೆಸ್ಸೆಸ್ ಸೊತ್ತಲ್ಲ. ಸಂಘ ಪರಿವಾರದವರು ಅವರ ಸಂಘಟನೆಯವರನ್ನೇ ಕೊಲ್ಲುವ ಸಂಸ್ಕೃತಿಗೆ ಇಳಿದಿದ್ದಾರೆ.

ಕೇರಳದಲ್ಲಿ ಒಡೆದಾಳುವ ನೀತಿಗೆ ಸಿಪಿಎಂ ತಡೆಯಾಗಿ ನಿಂತಿದ್ದರಿಂದಲೇ ನಮ್ಮ ಮೇಲೆ ದಾಳಿ ನಡೆಯುತ್ತಿದೆ. ನಾನು ಫಕ್ಕನೆ ಆಕಾಶದಿಂದ ಉದುರಿದ್ದಲ್ಲ. ಸಣ್ಣ ವಯಸ್ಸಿನಲ್ಲೇ ಆರೆಸ್ಸೆಸ್‌ನವರ ಕತ್ತಿ- ಚೂರಿಗಳ ಮಧ್ಯೆ ನಡೆದು ಬಂದವನು. ಇಂದಿಗೂ ನನಗೆ ಕತ್ತಿ- ಚೂರಿಗಳ ನಡುವೆ ನಡೆದಾಡಲು ಭಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News