×
Ad

ಯೋಚನೆಗಳನ್ನು ಯೋಜನೆಗಳಾಗಿ ರೂಪುಗೊಳಿಸಿ: ಡಾ.ಅಪ್ಪು ಕುಟ್ಟನ್

Update: 2017-02-25 20:00 IST

ಶಿರ್ವ, ಫೆ.25: ಯೋಚನೆಗಳು ಯೋಜನೆಗಳಾಗಿ ರೂಪುಗೊಳ್ಳುವತ್ತ ಸಂಶೋಧಕರು ಕಾರ್ಯಪ್ರವೃತ್ತರಾಗಬೇಕು. ಮನಸ್ಸಿನಲ್ಲಿ ಮೂಡಿದ ಎಲ್ಲ ಕಲ್ಪನೆಗಳು ಯೋಜನೆಗಳಾಗಿ ಪರಿವರ್ತನೆಯಾಗದಿದ್ದರೂ ಕಾರ್ಯರೂಪಕ್ಕೆ ಬಂದ ಒಂದು ಯೋಚನೆ ಕೂಡ ಪರಿಣಾಮ ಬೀರಬಲ್ಲದು ಎಂದು ಭೋಪಾಲ್ ಎನ್‌ಐಟಿಯ ಮಾಜಿ ನಿರ್ದೇಶಕ ಮತ್ತು ಸುರತ್ಕಲ್ ಎನ್‌ಐ ಟಿಕೆಯ ಪ್ರಾಧ್ಯಾಪಕ ಡಾ.ಕೆ.ಅಪ್ಪುಕುಟ್ಟನ್ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮೂಲಭೂತ ವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ಜರಗಿದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸಮ್ಮೇಳನದ ನಡಾವಳಿಗಳ ಸಿಡಿಯನ್ನು ಬಿಡುಗಡೆಗೊಳಿಸಿದ ಮಂಗಳೂರು ವಿಶ್ವವಿದ್ಯಾಲಯದ ಲೋಹ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಮಂಜುನಾಥ್ ಪಟ್ಟಾಭಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಸಾಧನೆಗಳ ಬಗ್ಗೆ ನಾವು ಹೆಮ್ಮೆ ಪಡಬೇಕಾಗಿದೆ ಎಂದು ತಿಳಿಸಿದರು.

ಸಿಎಸ್‌ಐಆರ್‌ನ ಹಿರಿಯ ವಿಜ್ಞಾನಿ ಡಾ.ರಮೇಶ ಮಾತನಾಡಿ, ಕೇವಲ ಹಣ ಸಂಪಾದನೆಯ ಉದ್ದೇಶದಿಂದ ಉದ್ಯೋಗವನ್ನು ಆರಿಸಿಕೊಳ್ಳದೆ ಸಂಶೋಧನಾತ್ಮಕ ಮತ್ತು ರಚನಾತ್ಮಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಕೆ.ಕೆ. ಶ್ರೀನಿವಾಸನ್ ವರದಿಯನ್ನು ಮಂಡಿಸಿದರು. ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್ ಉಪಸ್ಥಿತರಿದ್ದರು.

ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಡಾ. ವಾಸುದೇವ ಸ್ವಾಗತಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲೊಲಿಟ ಪ್ರಿಯ ಕ್ಯಾಸ್ಟಲಿನೊ ವಂದಿಸಿದರು. ಸೌಮ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News