ನ್ಯಾಯಾಲಯಗಳಲ್ಲಿ ವೀಡಿಯೋ ಕಾನ್‌ಫರೆನ್ಸ್ ಸೌಲಭ್ಯ ತ್ವರಿತ ಸ್ಥಾಪನೆಗೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶ

Update: 2017-02-25 14:30 GMT

ಮುಂಬೈ, ಫೆ.25: ಮಹಾರಾಷ್ಟ್ರದ ಎಲ್ಲ ನ್ಯಾಯಾಲಯಗಳಲ್ಲಿ ವೀಡಿಯೊ ಕಾನ್‌ಫರೆನ್ಸ್ (ವಿಸಿ)ಸೌಲಭ್ಯವನ್ನು ಅಳವಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ಸರಕಾರದ ವೈಫಲ್ಯದ ಕುರಿತು ಬಾಂಬೆ ಉಚ್ಚ ನ್ಯಾಯಾಲಯವು ತನ್ನ ಅಸಂತೋಷವನ್ನು ವ್ಯಕ್ತಪಡಿಸಿದೆ.

ಬೆಂಗಾವಲು ಪೊಲೀಸರ ಕೊರತೆಯಿಂದಾಗಿ ತನ್ನನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರು ಪಡಿಸುತ್ತಿಲ್ಲ ಎಂದು ದೂರಿಕೊಂಡು ಔರಂಗಾಬಾದ್ ಶಸ್ತ್ರಾಸ್ತ್ರ ವಶ ಪ್ರಕರಣದ ಆರೋಪಿಗಳ ಪೈಕಿ ಶೇಖ್ ಅಬ್ದುಲ್ ನಯೀಂ ಎಂಬಾತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ 2016,ಡಿಸೆಂಬರ್‌ನಲಿ ನ್ಯಾ.ವಿ.ಎಂ.ಕಾನಡೆ ನೇತೃತ್ವದ ವಿಭಾಗೀಯ ಪೀಠವು ಈ ವರ್ಷದ ಮಾರ್ಚ್‌ನೊಳಗೆ ರಾಜ್ಯದಲ್ಲಿಯ ಎಲ್ಲ ನ್ಯಾಯಾಲಯಗಳು ವಿಸಿ ಸೌಲಭ್ಯ ಹೊಂದಿರುವಂತೆ ಕ್ರಮ ಕೈಗೊಳ್ಳಲು ರಾಜ್ಯ ಗೃಹ ಇಲಾಖೆಗೆ ನಿರ್ದೇಶ ನೀಡಿತ್ತು.

ಆದರೆ ಈವರೆಗೂ ಸರಕಾರವು ನ್ಯಾಯಾಲಯದ ಆದೇಶವನ್ನು ಪಾಲಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಹಿತಿಯನ್ನು ಈ ವಾರದ ಆರಂಭದಲ್ಲಿ ನಡೆದ ವಿಚಾರಣೆ ವೇಳೆ ಪೀಠದ ಗಮನಕ್ಕೆ ತರಲಾಗಿತ್ತು.

ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಪೀಠವು,ತನ್ನ ಆದೇಶ ಪಾಲನೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ರಾಜ್ಯದಲ್ಲಿರುವ 2,200 ನ್ಯಾಯಾಲಯಗಳ ಪೈಕಿ 248 ನ್ಯಾಯಾಲಯಗಳು ವಿಸಿ ಸೌಲಭ್ಯ ಹೊಂದಿಲ್ಲ ಎಂದು ಹಿಂದಿನ ವಿಚಾರಣೆ ಸಂದರ್ಭ ಹೈಕೋರ್ಟ್ ಆಡಳಿತವು ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News