ತುಳುನಾಡಿನ ವೀರ ಸ್ಮಾರಕಗಳ ಪ್ರತ್ಯೇಕ ಅಧ್ಯಯನ ಅಗತ್ಯ: ಡಾ.ಪುಂಡಿಕಾ
ಉಡುಪಿ, ಫೆ.25: ತುಳುನಾಡಿನಲ್ಲಿ ಎಂಟನೆ ಶತಮಾನದಿಂದ 20ನೆ ಶತ ಮಾನದವರೆಗೆ ಪತ್ತೆಯಾಗಿರುವ ವೀರಕಲ್ಲು ಹಾಗೂ ಸ್ಮಾರಕಗಳ ಸಂಖ್ಯೆ ತೀರಾ ಕಡಿಮೆ. ಆದುದರಿಂದ ಈ ಬಗ್ಗೆ ಪ್ರತ್ಯೇಕ ಅಧ್ಯಯನ ಮಾಡಬೇಕಾದ ಅಗತ್ಯ ಇದೆ ಎಂದು ಮೂಡಬಿದಿರೆ ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ವಿಶ್ವವಿದ್ಯಾ ನಿಲಯ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಉಡುಪಿ ಎಂಜಿಎಂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ತಾಳ್ತಜೆ ಕೇಶವ ಭಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಱತುಳುನಾಡಿನ ವೀರ ಸ್ಮಾರಕಗಳುೞ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಯುದ್ಧದಲ್ಲಿ, ಊರನ್ನು ಕೊಳ್ಳೆ ಹೊಡೆಯುವಾಗ, ಗೋವುಗಳ ರಕ್ಷಣೆ, ರಾಜನಿಗಾಗಿ, ಸ್ತ್ರೀಯರ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದವರ ಸ್ಮಾರಕವೇ ವೀರ ಕಲ್ಲುಗಳು. ಕರ್ನಾಟಕದಲ್ಲಿ ಪ್ರಸ್ತುತ 3000ಕ್ಕೂ ಅಧಿಕ ವೀರಗಲ್ಲು ಕಂಡುಬರುತ್ತವೆ. ಕಾಸರಗೋಡು, ಮಂಗಳೂರು, ಉಡುಪಿ ಪ್ರದೇಶಗಳನ್ನೊಳ ಗೊಂಡ ತುಳುನಾಡಿನಲ್ಲಿ ಕೇವಲ 20ರಿಂದ 25 ವೀರ ಸ್ಮಾರಕಗಳು ಕಂಡು ಬಂದಿವೆ. ಇದಕ್ಕೆ ಕಾರಣ ಇಲ್ಲಿ ಹೆಚ್ಚು ಯುದ್ಧಗಳು ನಡೆದಿಲ್ಲ ಎಂಬುದು. ಇಲ್ಲಿ ಸಿಕ್ಕಿರುವ ಎಲ್ಲ ವೀರಕಲ್ಲುಗಳು ಯುದ್ಧದಲ್ಲಿ ಮಡಿದ ನೆನಪಿಗಾಗಿ ಸ್ಥಾಪಿಸಲಾಗಿದೆ. ಉಳಿದ ಯಾವುದೇ ವೀರ ಸ್ಮಾರಕಗಳು ಇಲ್ಲಿ ಕಂಡುಬಂದಿಲ್ಲ ಎಂದರು.
ಉಡುಪಿ ಉದ್ಯಾವರದ ಅಳುಪ ರಾಜರ ಮಧ್ಯೆ 21ವರ್ಷಗಳ ಕಾಲ ನಡೆದ ಯುದ್ಧದಲ್ಲಿ ಮಡಿದ ಒಟ್ಟು 12 ಸೈನಿಕರ ವೀರ ಸ್ಮಾರಕಗಳು ಉದ್ಯಾವರ, ಕೋಟ, ಬಂಟ್ವಾಳದ ಪೊಳಲಿ ಸಮೀಪ ಪತ್ತೆಯಾಗಿವೆ. ಅದೇ ರೀತಿ ಕಾರ್ಕಳದ ಕೆಲ್ಲ ಪುತ್ತಿಗೆ ಎಂಬಲ್ಲಿಯೂ ವೀರ ಸ್ಮಾರಕ ಸಿಕ್ಕಿದೆ. ಅಲ್ಲದೆ ಶಾಸನ ಇಲ್ಲದ ವೀರ ಸ್ಮಾರಕಗಳು ಕೂಡ ತುಳುನಾಡಿನಲ್ಲಿ ಪತ್ತೆಯಾಗಿವೆ ಎಂದು ಅವರು ತಿಳಿಸಿದರು.
ಸಂಶೋಧಕ ಪ್ರೊ.ಆರ್.ಶೇಷಶಾಸ್ತ್ರೀ ಅವರಿಗೆ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಅಕಾಡೆಮಿಯ ಆಡಳಿ ತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸಿದ್ದರು. ಪ್ರಶಸ್ತಿ ಸಮಿತಿಯ ಟಿ.ಕೆ. ರಘುಪತಿ ಉಪಸ್ಥಿತರಿದ್ದರು.
ಸಮಿತಿಯ ಡಾ. ತಾಳ್ತಜೆ ವಸಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ ದರು. ಸಹ ಸಂಯೋಜನಾಧಿಕಾರಿ ಡಾ.ಅಶೋಕ ಆಳ್ವ ವಂದಿಸಿದರು. ಡಾ. ಪಾದೇಕಲ್ಲು ವಿಷ್ಣು ಭಟ್ ಕಾರ್ಯಕ್ರಮ ನಿರೂಪಿಸಿದರು.