ಬಂಟ್ವಾಳ: ಕಿಡಿಗೇಡಿಗಳಿಂದ ಟಯರ್‌ಗೆ ಬೆಂಕಿ, ವಾಹನಗಳಿಗೆ ಕಲ್ಲು ತೂರಾಟ

Update: 2017-02-25 15:27 GMT

ಬಂಟ್ವಾಳ, ಫೆ. 25: ಮಂಗಳೂರು ಸೌಹಾರ್ದ ರ‍್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ವಿರೋಧಿಸಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದ ಸಂಘಪರಿವಾರ ಬಂದ್ ಯಶಸ್ವಿಗೊಳಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಹೊರತಾಗಿಯೂ ಬಂಟ್ವಾಳ ತಾಲೂಕಿನ ಹಲವೆಡೆ ರಸ್ತೆಯಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿರುವುದಲ್ಲದೆ ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಸಂಘಪರಿವಾರ ಬಂದ್‌ಗೆ ಕರೆನೀಡಿದ್ದರೂ ಶನಿವಾರ ಬೆಳಗ್ಗೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸರಕಾರಿ ಬಸ್‌ಗಳ ಸಹಿತ ಖಾಸಗಿ ವಾಹನಗಳು ಎಂದಿನಂತೆ ಸಂಚಾರಿಸುತ್ತಿದ್ದವು. ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಕಿಡಿಗೇಡಿಗಳು ತಾಲೂಕಿನ ಹಲವೆಡೆ ರಸ್ತೆಗಳಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿರುವುದು, ಸರಕಾರಿ ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ಶನಿವಾರ ಬೆಳಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಸರಕಾರಿ ಬಸ್‌ಗೆ ತೂರಾಟ ನಡೆದಿದ್ದು, ವಿಟ್ಲದ ಕುದ್ದುಪದವು ಎಂಬಲ್ಲಿಯೂ ಕಲ್ಲೆಸೆತ ನಡೆದಿದೆ. ಕಲ್ಲಡ್ಕ ಆಸುಪಾಸಿನ ಪುರ್ಲಿಪಾಡಿ, ಕೆ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್‌ಗಳನ್ನಿಟ್ಟು ಬೆಂಕಿ ಹಚ್ಚಿದ್ದಾರೆ. ವಿಟ್ಲ ಸರಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ 6 ಬಸ್‌ಗಳ ಪೈಕಿ ಒಂದು ಬಸ್ ನ ಹಿಂಬದಿಯ ಟೈಯರ್‌ಗೆ ಬೆಂಕಿ ಹಾಕಿದ್ದಾರೆ.

 ಕಂಬಳಬೆಟ್ಟು ಸೇತುವೆ ಮೇಲೆ ಹಾಗೂ ಮಾಣಿ ಮೈಸೂರು ಹೆದ್ದಾರಿಯ ಮಿತ್ತೂರು ರೇಲ್ವೆ ಸೇತುವೆ ಕೆಳಗಡೆ ರಸ್ತೆ ಮಧ್ಯೆದಲ್ಲಿ ಚಕ್ರಕ್ಕೆ ಬೆಂಕಿ ಹಚ್ಚಲಾಗಿದ್ದು ಕಂಬಳಬೆಟ್ಟು ಹಾಗೂ ಉರಿಮಜಲು ಎಂಬಲ್ಲಿ ಆಲದ ಮರದ ಗೆಲ್ಲುಗಳನ್ನು ಕಡಿದು ರಸ್ತೆ ಹಾಕಿ ಸಂಚಾರಕ್ಕೆ ತೊಂದರೆ ನೀಡಲಾಗಿದೆ. ಕುದ್ದುಪದವಿನಲ್ಲಿ ಪೊಲೀಸ್ ಇಲಾಖೆಯ ನಾಕಬೇಲಿಗಳನ್ನು ನಡು ರಸ್ತೆಯಲ್ಲಿಡುವ ಮೂಲಕ ಸಂಚಾರಕ್ಕೆ ತೊಡಕು ಮಾಡಿದರು. ವಿಟ್ಲದ ಕುದ್ದುಪದವಿನಲ್ಲಿ ಕೇರಳ ಖಾಸಗಿ ಬಸ್‌ಗೆ, ಕನ್ಯಾನದ ಮಲ್ಲಿಕಟ್ಟೆ ಹಾಗೂ ವಿಟ್ಲ ಪೇಟೆಯಲ್ಲಿ ಮೂರು ಸರಕಾರಿ ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಕಲ್ಲಡ್ಕ-ಕಾಂಞಂಗಾಡು ಹೆದ್ದಾರಿಯ ಒಕ್ಕೆತ್ತೂರು ಎಂಬಲ್ಲಿ ರಸ್ತೆ ಪಕ್ಕದಲ್ಲಿ ಎಂದಿನಂತೆ ನಿಲ್ಲಿಸಿದ್ದ ಇಲ್ಲಿನ ನಿವಾಸಿ ಅಬೂಬಕ್ಕರ್ ಎಂಬವರಿಗೆ ಸೇರಿದ ಲಾರಿಗೆ ಶನಿವಾರ ಬೆಳಗ್ಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ಲಾರಿಗೆ ಬೆಂಕಿ ಬಿದ್ದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಬಂಟ್ವಾಳ ಆಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ತೀವ್ರತೆಗೆ ಲಾರಿಯ ಮುಂಭಾಗ ಸುಟ್ಟು ಕರಕಲಾಗಿದೆ.

ಬಂದ್ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿದ್ದರಿಂದ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯದ ಕಾರಣ ತಾಲೂಕಿನ ಪ್ರಮುಖ್ಯ ವ್ಯವಹಾರ ಕೇಂದ್ರಗಳಾದ ಬಿ.ಸಿ.ರೋಡ್, ಮೆಲ್ಕಾರ್, ಕಲ್ಲಡ್ಕ, ವಿಟ್ಲ, ಫರಂಗಿಪೇಟೆಯಲ್ಲಿ ಜನಜೀವನ ಸ್ಥಬ್ದಗೊಂಡಿತ್ತು. ಆದರೆ ಫರಂಗಿಪೇಟೆಯಲ್ಲಿ ಬಹುತೇಕ, ಬಿ.ಸಿ.ರೋಡ್, ಮೇಲ್ಕಾರ್‌ಗಳಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಮಾಣಿ ಶನಿವಾರ ಸಂತೆ ನಡೆದಿದ್ದರೂ ಖಾಸಗಿ ಬಸ್‌ಗಳು ಇಲ್ಲದಿದ್ದರಿಂದ ಸಂತೆಯಲ್ಲಿ ಜನರು ವಿರಳವಾಗಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಲೂಕಿನಾದ್ಯಂತ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News