ಮುಲ್ಕಿ: ದುಷ್ಕರ್ಮಿಗಳಿಂದ ಕೆಲವೆಡೆ ಟಯರ್‌ಗೆ ಬೆಂಕಿ, ಬಸ್ ಗೆ ಕಲ್ಲು

Update: 2017-02-25 15:41 GMT

ಮುಲ್ಕಿ, ಫೆ.25: ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ದಕ್ಷಿಣ ಕನ್ನಡ ಜಿಲ್ಲೆ ಭೇಟಿ ವಿರೋಧಿಸಿ ಸಂಘಪರಿವಾರ ಕರೆ ನೀಡಿದ ಮಂಗಳೂರು ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಮುಲ್ಕಿ ಹೋಬಳಿಯಲ್ಲಿ ಭಾಗಶಃ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಳೆಯಂಗಡಿ ಪಕ್ಷಿಕೆರೆ, ಬೊಳ್ಳೂರು, ಎಸ್‌ಕೋಡಿ ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು ಟಯರಿಗೆ ಬೆಂಕಿ ಕೊಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಕೂಡಲೇ ಮುಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದರು. ಯಾತ್ರಾ ಸ್ಥಳವಾದ ಕಟೀಲಿನಲ್ಲಿ ಭಕ್ತರ ಕೊರತೆ ಕಾಣುತ್ತಿತ್ತು.ಮುಂಜಾಗರೂಕತಾ ಕ್ರಮವಾಗಿ ಮುಲ್ಕಿ ಪರಿಸರದ ಶಾಲಾ ಕಾಲೇಜುಗಳಿಗೆ ರಜೆ ಘೋಶಿಸಲಾಗಿತ್ತು. ಉಡುಪಿಯಿಂದ ಬರುತ್ತಿದ್ದ ಖಾಸಗಿ ಬಸ್‌ಗಳು ಹೆಜಮಾಡಿಯ ವರೆಗೆ ಬಂದು ಪ್ರಯಾಣಿಕರನ್ನು ಇಳಿಸಿ ವಾಪಾಸಾಗುತ್ತಿತ್ತು.

ಮುಲ್ಕಿ ಹೋಬಳಿಯ ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ಪಕ್ಷಿಕೆರೆ ಮುತ್ತಲಿನ ಪರಿಸರದಲ್ಲಿ ಭಾಗಶಃ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಹಾಗೂ ಮುಲ್ಕಿಯಿಂದ ಮೂಡಬಿದ್ರಿ ,ಕಟೀಲು ಕಡೆಗೆ ಹೋಗುವ ಬಸ್‌ಗಳು ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಿದ್ದು ರಿಕ್ಷಾ, ಕಾರು ಚಾಲಕರ ಸಂಘಟನೆಗಳು ಬಂದ್ ಗೆ ಬೆಂಬಲಿಸಿ ಸಂಚಾರ ಸ್ತಗಿತಗೊಳಿಸಿತ್ತು.

ರಾಷ್ತ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಸಂಚಾರವಿರಲಿಲ್ಲ. ಕೆಲವು ಖಾಸಗಿ ವಾಹನಗಳು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಲಾರಿಗಳ ಸಂಚಾರ ಮಾತ್ರ ಕಂಡು ಬರುತ್ತಿತ್ತು.

ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಠಾಣಾಧಿಕಾರಿ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಎರ್ಪಡಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಬಸ್‌ಗೆ ಕಲ್ಲು:
 ಬೆಳಗ್ಗಿನಿಂದ ಕಾಟಿಪಳ್ಳ, ಕೃಷ್ಣಾಪುರ - ಸುರತ್ಕಲ್-ಮಂಗಳೂರು ಸಂಚರಿಸುವ ಸರಕಾರಿ ಜೆನ್ ನರ್ಮ್ ಬಸ್‌ಗಳು ಓಡಾಟ ನಡೆಸುತ್ತಿದ್ದವು. ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಹೊಸಬೆಟ್ಟು ಪ್ರದೆಶದಲ್ಲಿ ಜೆನ್ ನರ್ಮ್ ಬಸ್‌ವೊಂದಕ್ಕೆ ದುಷ್ಕರ್ಮಿಗಳು ಕಲ್ಲು ತೂರುದ ಪರಿಣಾಮ ಬಸ್ ಸಂಚಾರ ಸಂಪೂರ್ಣ ಸ್ತಬಗೊಂಡಿತು. ಕಲ್ಲುತೂರಾಟದಿಂದ ಬಸ್‌ನ ಮುಂದಿನ ಗಾಜು ಒಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News