ಉಡುಪಿ: ವಿಶಿಷ್ಟ ಅನುಭವ ನೀಡಿದ ಅಡುಗೆ ಮನೆ ವಾದ್ಯಮೇಳ

Update: 2017-02-25 15:47 GMT

ಮಣಿಪಾಲ, ಫೆ.25: ಮಣಿಪಾಲ ವಿವಿಯ ಡಾ.ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠದ ವತಿಯಿಂದ ಮಣಿಪಾಲ ಡಾಟಿಎಂಎ ಪೈ ಪ್ಲಾನೆಟೋರಿಯಂ ಆವರಣದಲ್ಲಿರುವ ಎಂಸಿಪಿಎಚ್‌ನ ಡಾ.ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಇಂದು ಪ್ರಾರಂಭಗೊಂಡ ವಿಶಿಷ್ಟವಾದ ಱಅಡುಗೆಮನೆ ಜಗತ್ತುೞಕುರಿತ ವಿಚಾರ ಸಂಕಿರಣ ಹಲವು ಕಾರಣಗಳಿಗೆ ಅಪರೂಪದ್ದೆನಿಸಿತು.

ಕನ್ನಡದ ಖ್ಯಾತ ಸಾಹಿತಿ, ಲೇಖಕಿ ವೈದೇಹಿ ಅವರ ನೇತೃತ್ವದಲ್ಲಿ ಆಯೋಜನೆ ಗೊಂಡಿರುವ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಮೊದಲ ಬಾರಿ ಸಾಹಿತ್ಯ ವಲಯದಲ್ಲಿ ಅಡುಗೆ ಮನೆಗೂ ಪ್ರಾತಿನಿಧ್ಯ ದೊರೆಯುತ್ತಿದೆ. ಈ ಮೂಲಕ ಅಡುಗೆ ಮನೆಯ ಅನಭಿಷಕ್ತ ದೊರೆ (ರಾಣಿ?)ಯಂತಿರುವ ಮಹಿಳೆಯರು ತಮ್ಮ ಸಾಮ್ರಾಜ್ಯದಿಂದ ಹೊರಬಂದು ಅಡುಗೆಮನೆಯ ವಿವಿಧ ಮಜಲುಗಳನ್ನು ಹೊರಜಗತ್ತಿನ ಮುಂದೆ ತೆರೆದಿಡಲು ಸಾಧ್ಯವಾಗಲಿದೆ.
 ಈ ದಿಕ್ಕಿನಲ್ಲಿ ಮೊದಲ ಕಾರ್ಯಕ್ರಮವಾಗಿ ನಡೆದ ಱಅಡುಗೆ ಮನೆ ವಾದ್ಯಮೇಳೞನಾಡಿನ ನಾನಾ ಭಾಗಗಳಿಂದ ಆಗಮಿಸಿ ಕಿಕ್ಕಿರಿದು ನೆರೆದ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಿತು.

ರಾಜ್ಯದ ಏಕೈಕ ಮಹಿಳಾ ಘಟಂ ವಾದಕಿ ವಿದುಷಿ ಸುಕನ್ಯಾ ರಾಮಗೋಪಾಲ್ ಅವರು ಸಂಯೋಜಿಸಿದ ಈ ವಾದ್ಯಮೇಳ, ಅವರ ನಾಲ್ವರು ಶಿಷ್ಯರ ಮೂಲಕ ಅಡುಗೆಮನೆಯ ಘಮ್ಮನೆಯ ಪರಿಮಳವನ್ನು ವೀಕ್ಷಕರ ಹೃದಯಕ್ಕೆ ತಲುಪಿಸಿತು.

ಅಡುಗೆ ಮನೆಯೊಳಗಿನ ಪರಿಕರಗಳನ್ನೇ ಬಳಸಿದ ಸುಕನ್ಯಾ ರಾಮಗೋಪಾಲ್ ಮತ್ತವರ ತಂಡ ಅವುಗಳ ಮೂಲಕ ಅಡುಗೆಮನೆ ಪ್ರಪಂಚವನ್ನೇ ತೆರೆದಿಟ್ಟಿತು. ಘಟಂ (ಮಡಕೆ), ಕುಟ್ಟಾಣಿ, ಡಬ್ಬ, ಬಾಲ್ದಿ ಹಾಗೂ ಅಡುಗೆಮನೆಯಲ್ಲಿರುವ ಎಲ್ಲಾ ಪರಿಕರಗಳನ್ನು ಇಟ್ಟುಕೊಂಡು, ಕೈಲಾಸದಲ್ಲಿ ಗೌರಿ ತನ್ನ ಗಂಡ, ಮಕ್ಕಳು ಹಾಗೂ ಗಣಗಳಿಗೆ ಬಡಿಸಿದ ಅಡುಗೆಯನ್ನು ಪರಿಣಾಮಕಾರಿಯಾಗಿ ನೋಡುಗರೆದುರು ತೆರೆದಿಟ್ಟಿತು.

ನಂತರ ಅಡುಗೆ ಮನೆ ಪದ್ಯಗಳ ಕವಿಗೋಷ್ಠಿಯೂ ನೋಡುಗರಿಗೆ ಹೊಸ ಅನುಭವ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News