ಇಂದಿನ ಸಮಸ್ಯೆಗಳಿಗೆ ಪರಿಹಾರ ಮೌಲ್ಯಾಧಾರಿತ ಶಿಕ್ಷಣದಲ್ಲಿದೆ: ಶ್ರೀಮಾತಾ ಅಮೃತಾನಂದಮಯಿ ದೇವಿ

Update: 2017-02-25 16:03 GMT

ಉಡುಪಿ, ಫೆ.25: ಇಂದು ಸಮಾಜ ಎದುರಿಸುತ್ತಿರುವ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರ ಮೌಲ್ಯಾಧಾರಿತ ಶಿಕ್ಷಣದಲ್ಲಿದೆ ಎಂದು ಸದ್ಗುರು ಶ್ರೀಮಾತಾ ಅಮೃತಾನಂದಮಯಿ ದೇವಿ ಹೇಳಿದ್ದಾರೆ.

ಉಡುಪಿ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಉಡುಪಿ ಶ್ರೀಮಾತಾ ಅಮೃತಾನಂದಮಯಿ ಸೇವಾ ಸಮಿತಿಯಿಂದ ಆಯೋಜಿಸಲಾದ 'ಅಮೃತ ವೈಭವ' ದಲ್ಲಿ ನೆರೆದ ಸಹಸ್ರಾರು ಮಂದಿ ಭಕ್ತರನ್ನುದ್ದೇಶಿಸಿ ಪ್ರವಚನ ನೀಡಿ ಮಾತನಾಡುತಿದ್ದರು.

ಎರಡು ರೀತಿಯ ವಿದ್ಯಾಭ್ಯಾಸವಿದೆ. ಜೀವನಕ್ಕಾಗಿ ವಿದ್ಯಾಭ್ಯಾಸ ಹಾಗೂ ಜೀವನೋಪಾಯಕ್ಕಾಗಿ ವಿದ್ಯಾಭ್ಯಾಸ. ಶಿಕ್ಷಣದ ಉದ್ದೇಶ ಯತ್ರಗಳ ಭಾಷೆ ಕಲಿಯುವುದಲ್ಲ. ಬದಲಿಗೆ ಹೃದಯವಂತಿಕೆಯನ್ನು ಕಲಿಯುವದಾಗಿದೆ. ನೈತಿಕ ಹಾಗೂ ಆಧ್ಯಾತ್ಮಿಕ ವೌಲ್ಯಗಳನ್ನು ಆಧರಿಸಿದ ಸಂಸ್ಕಾರ ನೀಡುವುದಾಗಿದೆ ಎಂದರು.

ಭಯೋತ್ಪಾದನೆ ಮನುಕುಲದ ದೈನಂದಿಕ ಸಮಸ್ಯೆಯಾಗಿದೆ. ದು:ಸ್ವಪ್ನಕ್ಕಿಂತಲೂ ಭಯಾನಕವಾದ ಜಾಗೃತ ಅವಸ್ಥೆಯಲ್ಲಿ ನಾವಿದ್ದೇವೆ. ಇಂದು ಮನುಷ್ಯ ನಡೆದಾಡುವ ದುರಂತ ಎನಿಸಿಕೊಂಡಿದ್ದಾನೆ. ಆತನ ಮನಸ್ಸು ತನ್ನ ವಿವೇಕವನ್ನೇ ಕಳೆದುಕೊಂಡಿದೆ ಎಂದು ಶ್ರೀಮಾತಾ ಖೇಧ ವ್ಯಕ್ತಪಡಿಸಿದರು.

ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತಾ ಆಮೃತಾನಂದಮಯಿ ವತಿಯಿಂದ ಉಡುಪಿ ಜನತೆಗೆ ಹಲವು ಸೇವಾ ಚಟುವಟಿಕೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಅಮೃತಶ್ರೀ ಮಹಿಳಾ ಸಬಲೀಕರಣ ಯೋಜನೆಯಡಿ 20ಕ್ಕೂ ಅಧಿಕ ಮಹಿಳೆಯರಿಗೆ ಕಿಟ್‌ಗಳನ್ನು ವಿತರಿಸಲಾಯಿತು.

ಅಲ್ಲದೇ ಗೋದಾನ, ಹಲವು ಅಂಗನವಾಡಿಗಳಿಗೆ ನೀರು ಶುದ್ಧೀಕರಣ ಯಂತ್ರ ಕೊಡುಗೆ, ಸ್ವಚ್ಛತಾ ಕೆಲಸ ನಿರ್ವಹಿಸುವ ಉಡುಪಿಯ ಪೌರಕಾರ್ಮಿಕರಿಗೆ ಕಿಟ್‌ಗಳನ್ನು ಮಾತೆ ವಿತರಿಸಿದರು.

ಸಮಾರಂಭದಲ್ಲಿ ರಾಜ್ಯ ಧಾರ್ಮಿಕ ದತ್ತಿ ಸಚಿವ ರುದ್ರಪ್ಪ ಮಾನಪ್ಪ ಲಮ್ಹಾಣಿ, ಜಿಲ್ಲಾ ಉಸ್ತುವಾರಿ ಸಚಿವ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶ್ರೀಧರ ಕಿನ್ನಿಮುಲ್ಕಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ವತಿಯಿಂದ ಮಾತಾ ಅಮೃತಾನಂದಮಯಿ ಅವರಿಗೆ ಕಡಗೋಲು ಕೃಷ್ಣನ ಪಂಚಲೋಹದ ಮೂರ್ತಿಯನ್ನು ನೀಡಿ ಗೌರವಿಸ ಲಾಯಿತು. ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಅತಿಥಿಗಳನ್ನು ಸ್ವಾಗತಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಾತಾ ಅಮೃತಾನಂದಮಯಿ ಅವರಿಂದ ಪ್ರವಚನ, ಸತ್ಸಂಗ, ಭಜನೆ, ಧ್ಯಾನ ಕಾರ್ಯಕ್ರಮ ನಡೆಯಿತು. ಅದಾದ ಬಳಿಕ ಅಮ್ಮ, ನೆರೆದ ಪ್ರತಿಯೊಬ್ಬ ಭಕ್ತರಿಗೂ ದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News