ಮೂರರ ಹರೆಯದ ಅವಳಿ ಸೋದರರು ವಾಷಿಂಗ್ ಮಷಿನ್‌ನಲ್ಲಿ ಮುಳುಗಿ ಮೃತ್ಯು

Update: 2017-02-25 16:12 GMT

ಹೊಸದಿಲ್ಲಿ, ಫೆ.25: ಆ ಮಕ್ಕಳನ್ನು ಕೆಲವೇ ನಿಮಿಷಗಳ ಮಟ್ಟಿಗೆ ಮನೆಯಲ್ಲಿಯೇ ಬಿಟ್ಟು ತಾಯಿ ಹೊರಗೆ ಹೋಗಿದ್ದಳು. ಅವಳು ವಾಪಸ್ ಬರುವಷ್ಟರಲ್ಲಿ ಇಬ್ಬರೂ ಮಕ್ಕಳು ನೀರು ತುಂಬಿದ್ದ ವಾಷಿಂಗ್ ಮಷಿನ್ ಹತ್ತಿದವರು ಅದರೊಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಶನಿವಾರ ಮಧ್ಯಾಹ್ನ ಪಶ್ಚಿಮ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಮಕ್ಕಳ ತಾಯಿ ಬಟ್ಟೆಗಳನ್ನು ತೊಳೆಯಲು ಸಜ್ಜಾಗಿದ್ದು ವಾಷಿಂಗ್ ಮಷಿನ್‌ನಲ್ಲಿ ನೀರು ತುಂಬಿಸಿದ ಬಳಿಕ ಮನೆಯಲ್ಲಿ ಡಿಟರ್ಜಂಟ್ ಪೌಡರ್ ಇಲ್ಲ ಎನ್ನುವುದು ನೆನಪಾಗಿತ್ತು. ಹೀಗಾಗಿ  ಆಟವಾಡುತ್ತಿದ್ದ ಅವಳಿ-ಜವಳಿಗಳಾದ ಮೂರರ ಹರೆಯದ ನಿಶಾಂತ್ ಮತ್ತು ನಕ್ಷರನ್ನು ಅಲ್ಲಿಯೇ ಬಿಟ್ಟು ಪೌಡರ್ ತರಲು ನೆರೆಯ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಳು.ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ.

 ಆರು ನಿಮಿಷಗಳ ಬಳಿಕ ವಾಪಸಾದಾಗ ಮಕ್ಕಳು ಕಂಡು ಬಂದಿರಲಿಲ್ಲ. 20 ನಿಮಿಷಗಳ ವಿಫಲ ಹುಡುಕಾಟದ ನಂತರ ಪೊಲೀಸರನ್ನು ಕರೆಸಲಾಗಿತ್ತು. ಈ ಹುಡುಕಾಟದ ನಡುವೆಯೇ ವಾಷಿಂಗ್ ಮಷಿನ್‌ನಲ್ಲಿ ಇಣುಕಿದ ಮಕ್ಕಳ ತಂದೆಗೆ ಅಲ್ಲಿ ಅವರು ಪತ್ತೆಯಾಗಿದ್ದರು. ನೀರಿನಲ್ಲಿ ಮುಳುಗಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರೂ ಮಕ್ಕಳು ಮೃತರಾಗಿದ್ದಾರೆಂದು ಅಲ್ಲಿಯ ವೈದ್ಯರು ಘೋಷಿಸಿದ್ದರು. ನಂಬದ ಅವರು ಇನ್ನೊಂದು ಆಸ್ಪತ್ರೆಗೆ ಧಾವಿಸಿದರೂ ಅಲ್ಲಿಯ ವೈದ್ಯರೂ ಅದನ್ನೇ ಹೇಳಿದಾಗ ನಂಬುವುದು ಅವರಿಗೆ ಅನಿವಾರ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News