ಕಿನ್ನಿಗೋಳಿ ಮುಲ್ಕಿ ಪರಿಸರದಲ್ಲಿ ಅಕ್ರಮ ದಂಧೆಗಳು: ಜನಸಂಪರ್ಕ ಸಭೆಯಲ್ಲಿ ಸ್ಫೋಟಗೊಂಡ ಆಕ್ರೋಶ

Update: 2017-02-25 16:18 GMT

ಮುಲ್ಕಿ, ಫೆ.25: ಹೋಬಳಿಯ ಜನಸಂಪರ್ಕ ಸಬೆ ನೀರಸವಾಗಿಯೇ ಕಿನ್ನಿಗೋಳಿಯಲ್ಲಿ ನಡೆಯಿತು. ಸಭೆ 10:30ಕ್ಕೆ ಇದ್ದರೂ ಸಭೆ ಶುರುವಾದಾಗ ಬರೋಬ್ಬರಿ 11:40 ಆಗಿತ್ತು. ಜಿಲ್ಲಾ ಬಂದ್ ಎಪೆಕ್ಟ್ ಜನಸಂಪರ್ಕ ಸಭೆಗೂ ತಟ್ಟಿತ್ತು.

ಮುಲ್ಕಿ, ಕಿನ್ನಿಗೋಳಿ, ಕೆ.ಎಸ್.ರಾವ್ ನಗರ, ಅಂಗರಗುಡ್ಡೆ, ಕಾರ್ನಾಡು ಪರಿಸರದಲ್ಲಿ ಅಕ್ರಮ ದಂಧೆಗಳು ನಡೆಯುತ್ತವೆ. ಪೊಲೀಸರು ನಿಜವಾದ ಅಪರಾಧಿಗಳನ್ನು ಬಂಧಿಸುತ್ತಿಲ್ಲ ಎಂದು ಗ್ರಾಮಸ್ಥರು ಮುಲ್ಕಿ ತಹಶೀಲ್ದಾರ್ ಕಿಶೋರ್ ಮತ್ತು ಪೊಲೀಸ್ ಇಲಾಖೆಯನ್ನು ಶನಿವಾರ ನಡೆದ ಕಿಲ್ಪಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕಿನ್ನಿಗೋಳಿಯ ಉಮೇಶ್ ಶಣೈ ಮಾತನಾಡಿ, ಕಿನ್ನಿಗೋಳಿ ಪ್ರಧಾನ ರಸ್ತೆಯಲ್ಲಿ ಅಕ್ರಮವಾಗಿ ಕಲ್ಲು ಹಾಗೂ ಹೊಯಿಗೆ ಮಾಫಿಯಾ ರಾಜಾರೊಷವಾಗಿ ನಡೆಯುತ್ತಿದ್ದರೂ ಪೊಲೀಸರು ಅವರನ್ನು ಬಂಧಿಸದೆ ದ್ವಿಚಕ್ರ ವಾಹನಿಗರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಕಿಶೋರ್, ಲಿಖಿತ ದೂರು ನೀಡಿದರೆ ಪರಿಶಿಲಿಸಲಾಗುವುದು ಎಂದು ಭರವಸೆ ನೀಡಿದರು.

 ಹಳೆಯಂಗಡಿ ಪಂಚಾಯತ್ ಸದಸ್ಯ ಅಬ್ದುಲ್ ಖಾದರ ಮಾತನಾಡಿ, ಆಹಾರ ಇಲಾಖೆಯ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. 'ನೀವು ಪ್ರತೀ ಜನಸಂಪರ್ಕ ಸಭೆಯಲ್ಲಿ ಭಾಷಣ ಬಿಗಿದು ಹೋಗುತ್ತೀರಿ, ಜನರ ಸಮಸ್ಯೆ ಅರ್ಥ ಮಾಡಿಕೊಂಡಿದ್ದೀರಾ?' ಎಂದು ಆಹಾರ ಇಲಾಖೆಯ ಅಧಿಕಾರಿ ವಾಸು ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.

'ಬಡವರು ರೇಷನ್ ಕಾರ್ಡ್‌ಗೆ ಅಲೆದಾಡಿ ಸುಸ್ತಾಗಿದ್ದಾರೆ. ಗ್ರಾಮಸಭೆಗೆ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಪಂಚಾಯಯತ್‌ನಲ್ಲಿ ಜನರಿಗೆ ಉತ್ತರ ಕೊಡುವವರು ಯಾರು' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗಲಿಬಿಲಿಗೊಂಡ ಆಹಾರ ಇಲಾಖಾಧಿಕಾರಿ ವಾಸು ಶೆಟ್ಟಿ, ಸಾವರಿಸುತ್ತಾ ನಿಧಾನವಾಗಿಯೇ ಉತ್ತರಿಸಿ ಮಾತು ಮುಗಿಸಲು ಪ್ರಯತ್ನಿಸಿದರು. ಆದರೆ, ಮರುಪ್ರಶ್ನೆ ಹಾಕಿದ ಅಬ್ದುಲ್ ಖಾದರ್, ಪಡಿತರ ಚೀಟಿ ಅವ್ಯವಸ್ಥೆ ಶೀಘ್ರ ಸರಿಯಾಗದಿದ್ದರೆ ಮಂಗಳೂರಿನ ಆಹಾರ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಸಬೆಗೆ ತಾ.ಪಂ. ಮತ್ತು ಜಿ.ಪಂ. ಸದಸ್ಯರು ಗೈರು ಆಕ್ರೋಶ: 
ಜನಸಂಪರ್ಕ ಸಭೆಗೆ ಕಿನ್ನಿಗೋಳಿ ಹಳೆಯಂಗಡಿ, ಮುಲ್ಕಿ ಪರಿಸರದ ತಾ.ಪಂ. ಹಾಗೂ ಜಿ.ಪಂ. ಸದಸ್ಯರ ಗೈರು ಬಗ್ಗೆ ಗ್ರಾಮಸ್ಥ ಗಂಗಾಧರ ಶೆಟ್ಟಿ ಎಳತ್ತೂರು ಆಕ್ರೋಶ ವ್ಯಕ್ತಪಡಿಸಿ ಸಭೆಗೆ ಹಾಜರಾಗದ ಇಂತಹಾ ಜನಪ್ರತಿನಿಧಿಗಳು ಬೇಕೆ? ಎಂದು ಅವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಸಭೆಯನ್ನು ಒತ್ತಾಯಿಸಿದರು.

 ಮುಲ್ಕಿಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೇಕಾಗುವ ಉಪಕರಣಗಳು ಸಿಗುತ್ತಿಲ್ಲ ಎಂದು ಕಿನ್ನಿಗೋಳಿ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ದೂರಿದರು. ಎಪಿಎಂಸಿ ಮತದಾನದಲ್ಲಿ ನಿಜವಾದ ಕೃಷಿಕರಿಗೆ ಮತದಾನ ಮಾಡಲು ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಕೃಷಿ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಗ್ರಾಮಸ್ಥರೊಬ್ಬರು ಒತ್ತಾಯಿಸಿದರು.

ಕಿನ್ನಿಗೋಳಿಯಲ್ಲಿ ಅಗ್ನಿ ಶಾಮಕ ದಳದ ಆವಶ್ಯಕತೆ ಹಾಗೂ ಕಿನ್ನಿಗೋಳಿ, ಮೆನ್ನಬೆಟ್ಟು ಗ್ರಾಮವನ್ನು ಸೇರಿಸಿ ಪಟ್ಟಣ ಪಂಚಾಯತ್ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಶಾಸಕ ಅಭಯಚಂದ್ರ ಜೈನ್ ಸಮ್ಮತಿಸಿದರು. ವೇದಿಕೆಯಲ್ಲಿ ಕಂದಾಯ ಅಧಿಕಾರಿಗಳು, ಮೂಡಾ ಸದಸ್ಯ ವಸಂತ್ ಬೆರ್ನಾಡ್, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಜೋಯಲ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News