ಉಡುಪಿ: ಡಾ.ಚಿನ್ನಪ್ಪ ಗೌಡ, ಹಿದಾಯತುಲ್ಲರಿಗೆ 'ಜಾನಪದ ಪ್ರಶಸ್ತಿ' ಪ್ರದಾನ

Update: 2017-02-25 16:52 GMT

ಉಡುಪಿ, ಫೆ.25: ನಿಟ್ಟೂರು ಕೆಮ್ಮಲಜೆ ಜಾನಪದ ಪ್ರಕಾಶನದ ವತಿಯಿಂದ ಶನಿವಾರ ಉಡುಪಿಯ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ಜರಗಿದ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಡಾ.ಚಿನ್ನಪ್ಪ ಗೌಡರಿಗೆ 'ಜಾನಪದ ವಿದ್ವಾಂಸ ಪ್ರಶಸ್ತಿ' ಮತ್ತು ನಾಗಸ್ವರ ಸಂಗೀತ ವಿದ್ವಾನ್ ಸಯ್ಯದ್ ಹಿದಾಯತುಲ್ಲ ಸಾಹೇಬ್ ಅವರಿಗೆ 'ಜಾನಪದ ಕಲಾವಿದ ಪ್ರಶಸ್ತಿ' ಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಚಿನ್ನಪ್ಪ ಗೌಡ, ರಾಜಕಾರಣಿಗಳು ನಮ್ಮನ್ನು ವಿಭಜಿಸುವ ಕೆಲಸ ಮಾಡಿದರೆ, ಜಾನಪದ ಸಂಸ್ಕೃತಿಯು ನಮ್ಮನ್ನು ಜೋಡಿಸುವ ಕಾರ್ಯ ಮಾಡುತ್ತದೆ. ಜಾನಪದ ಕಲಾವಿದರೇ ಜಾನಪದ ಸಂಸ್ಕೃತಿಯ ಅಧಿಕೃತ ಒಡೆಯರು. ಒಂದು ಕಾಲದಲ್ಲಿ ವ್ಯವಸ್ಥಿತವಾಗಿದ್ದ ತುಳು ಸಂಸ್ಕೃತಿ ಅಧ್ಯಯನವು ಇಂದು ಕಡಿಮೆಯಾಗುತ್ತಿದೆ. ಆದುದರಿಂದ ಈ ಬಗ್ಗೆ ಗಂಭೀರ ಅಧ್ಯಯನಗಳು ಹೆಚ್ಚು ಹೆಚ್ಚು ಆಗಬೇಕಾಗಿದೆ ಎಂದರು.

 ಪ್ರಶಸ್ತಿಯನ್ನು ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಸುರೇಂದ್ರ ರಾವ್ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪಾಂಗಾಳಗುಡ್ಡೆ ಗರೋಡಿ ಮನೆಯ ಸುಧಾಕರ ಡಿ.ಅಮೀನ್ ಅವರನ್ನು ಸನ್ಮಾನಿಸಲಾಯಿತು.

ಬನ್ನಂಜೆ ಬಾಬು ಅಮೀನ್ ಅವರ 'ತುಳುನಾಡ ದೈವಗಳು', 'ನುಡಿಕಟ್ಟ್‌', 'ದೈವ ನೆಲೆ', 'ದೈವಗಳ ಮಡಿಲಲ್ಲಿ' ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷತೆಯನ್ನು ಪ್ರಕಾಶನದ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಂಶೋಧಕ ಎಂ.ಇ.ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಡಾ.ದುಗ್ಗಪ್ಪ ಕಜೆಕಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರವೀಣ್ ಕುಮಾರ್ ವಂದಿಸಿ ದರು. ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News