×
Ad

ಕೋಮುವಾದಿಗಳ ಜತೆ ಕೈ ಜೋಡಿಸಬೇಡಿ: ಸಚಿವ ರಮಾನಾಥ ರೈ ಕರೆ

Update: 2017-02-26 17:41 IST

ಮಂಗಳೂರು, ಫೆ.26: ಕಾಂಗ್ರೆಸಿಗರು ಯಾವ ಕಾರಣಕ್ಕೂ ಕೋಮುವಾದಿಗಳ ಜತೆ ಕೈ ಜೋಡಿಸಬಾರದು. ಹಗಲು ಕಾಂಗ್ರೆಸ್‌ನಲ್ಲಿದ್ದು, ರಾತ್ರಿ ಕೋಮುವಾದಿಗಳ ಜತೆ ಸ್ನೇಹದಿಂದ ಇರುವವರನ್ನು ದೂರ ಇಡಬೇಕು. ಹಾಗಾದರೆ ಮಾತ್ರ ಪಕ್ಷ ಉದ್ಧಾರವಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

ನಗರದ ರೋಹನ್ ಕಾರ್ಪೊರೇಶನ್ ಕಚೇರಿಯಲ್ಲಿ ರವಿವಾರ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬ್ದುಲ್ ಕಲಾಂ ಆಝಾದ್‌ರ 58ನೆ ಪುಣ್ಯತಿಥಿ ಅಂಗವಾಗಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುಪಿಎ ಸರಕಾರವಿದ್ದಾಗ ಕೈಗೊಂಡ ಆಧಾರ್, ನೇರ ನಗದು ವ್ಯವಹಾರ ಮತ್ತು ಎಫ್ ಡಿಐ, ಇಂಧನ ದರಗಳು ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದಾಗ ಕೆಲವು ಕಾಂಗ್ರೆಸಿಗರೂ ಬಿಜೆಪಿಗರ ಮಾತನ್ನು ಸಮರ್ಥಿಸುತ್ತಿದ್ದರು. ಈಗ ಎನ್‌ಡಿಎ ಅದನ್ನೇ ಮಾಡುತ್ತಿವೆ. ಕಾಂಗ್ರೆಸ್‌ನ ಕೆಲವರಂತೂ ಸಂಘ ಪರಿವಾರವನ್ನು ಹೊಗಳುತ್ತಿದ್ದಾರೆ ಎಂದು ರೈ ಹೇಳಿದರು.

 ನಾನು ಸಂಘಪರಿವಾರದೊಂದಿಗೆ ಬಹಿರಂಗ ಹೋರಾಟ ಮಾಡಿ 6 ಬಾರಿ ಗೆದ್ದವ. ಅವರ ವೇದಿಕೆಯನ್ನೂ ನಾನು ಧಿಕ್ಕರಿಸುತ್ತೇನೆ. ಅವರ ನೆರಳೂ ನಮಗೆ ಬೇಡ ಎಂದ ರೈ, ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪಕ್ಷ. ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸಿ ಸಂಘಟಿಸಿದ ಪಕ್ಷವಾಗಿದೆ ಕಾಂಗ್ರೆಸ್. ಇಂತಹ ಪಕ್ಷವನ್ನು ಕಟ್ಟಿ ಬೆಳೆಸುವುದು ಕಾಂಗ್ರೆಸ್ಸಿಗರ ಧ್ಯೇಯವಾಗಬೇಕು ಎಂದು ರೈ ನುಡಿದರು.

ಸ್ವಾತಂತ್ರಕ್ಕಾಗಿ ಬಿಜೆಪಿ ಹೋರಾಟ ಮಾಡಿದ್ದು ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತದೆ. ಇದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಜಾಗೃತಿ ಮೂಡಿಸಬೇಕಾಗಿದೆ. ಪ್ರಥಮ ಪ್ರಧಾನಿ ನೆಹರೂ ಸಹಿತ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಹಾಸ್ಯ ಮಾಡಲಾಗುತ್ತದೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ. ಇಂತಹ ಸಂದರ್ಭ ಪಕ್ಷದ ವರ್ಚಸ್ಸು ಹೆಚ್ಚಿಸುವ ಕೆಲಸ ನಡೆಯಬೇಕು ಎಂದು ರಮಾನಾಥ ರೈ ನುಡಿದರು.

ಶಾಸಕ ಜೆ.ಆರ್.ಲೋಬೊ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಕೆ.ಎಸ್. ಮುಹಮ್ಮದ್ ಮಸೂದ್, ರಾಜ್ಯ ಇಂಟಕ್ ಉಪಾಧ್ಯಕ್ಷ ಸಿ.ಎ.ರಹೀಂ ಮತ್ತಿತರರು ಉಪಸ್ಥಿತರಿದ್ದರು.

ಸರಕಾರದ ವಿವಿಧ ಕಾರ್ಯಕ್ರಮ ಮತ್ತು ಅನುಷ್ಠಾನದ ಕಾರ್ಯತಂತ್ರ ಕುರಿತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಪಕ್ಷದ ಸಿದ್ಧಾಂತ- ಸಂಘಟನೆ ಕುರಿತು ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ. ರಾಜಾರಾಮ್ ತೋಳ್ಪಾಡಿ ಮತ್ತು ಎಐಸಿಸಿ ಸದಸ್ಯ ಪಿ.ವಿ. ಮೋಹನ್ ಉಪನ್ಯಾಸ ನೀಡಿದರು.

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಬೆಂಗರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News