ಗೋಹತ್ಯೆ ನಿಷೇಧಿಸಲು ಸಂವಿಧಾನವನ್ನೇ ಬದಲಾಯಿಸಿ: ಪೇಜಾವರ ಶ್ರೀ
ಉಡುಪಿ, ಫೆ.26: ಗೋಹತ್ಯೆ ನಿಷೇಧವು ಆಯಾ ರಾಜ್ಯಗಳಿಗೆ ಸಂಬಂಧಿಸಿದ್ದಾಗಿರುವುದರಿಂದ ಕೇಂದ್ರ ಸರಕಾರಕ್ಕೆ ಅದನ್ನು ಇಡೀ ದೇಶಾದ್ಯಂತ ಜಾರಿಗೆ ತರಲು ಆಗುತ್ತಿಲ್ಲ. ಆದುದರಿಂದ ಕೇಂದ್ರ ಸರಕಾರ ಸಂವಿಧಾನವನ್ನೇ ಬದಲಾಯಿಸಿ ದೇಶಾದ್ಯಂತ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ರಾಷ್ಟ್ರಾದ್ಯಂತ ಗೋಹತ್ಯೆ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟದ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳ, ಹಿಂದು ಜಾಗರಣಾ ವೇದಿಕೆ, ಗೋಪರಿವಾರಗಳು ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ರವಿವಾರ ಹಮ್ಮಿಕೊಳ್ಳಲಾದ ಗೋಸತ್ಯಾಗ್ರಹವನ್ನು ಗೋ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಂದಿನ ಚುನಾವಣೆಯಲ್ಲಿ ಗೋಹತ್ಯೆ ನಿಷೇಧಿಸುವ ಪಕ್ಷಕ್ಕೆ ಮತ ಹಾಕುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ದೇಶದ ಸಮೃದ್ಧಿ ಹಾಗೂ ಮಾನವೀಯತೆ ದೃಷ್ಠಿಯಿಂದ ಗೋಹತ್ಯೆ ನಿಷೇಧ ಮಾಡುವುದು ಅಗತ್ಯ ಎಂದು ಅವರು ತಿಳಿಸಿದರು.
ಶ್ರೀಮಂತರು ಮನೆಯಲ್ಲಿ ನಾಯಿಗಳ ಸಂರಕ್ಷಣೆ ಮಾಡುವ ರೀತಿಯಲ್ಲೇ ಗೋವುಗಳನ್ನು ಸಾಕಬೇಕು. ಪ್ರತಿ ಗ್ರಾಮಗಳಲ್ಲಿ ಸಂಘಟನೆಯ ಮೂಲಕ ಗೋಶಾಲೆಗಳನ್ನು ಸ್ಥಾಪಿಸಬೇಕು. ಪ್ರತಿ ದೇವಸ್ಥಾನ ಗಳು ಕೂಡ ಗೋಶಾಲೆಯನ್ನು ನಿರ್ಮಿಸಬೇಕು. ಅದೇ ರೀತಿ ಸರಕಾರ ಕೂಡ ಪ್ರತಿ ತಾಲೂಕಿನಲ್ಲೂ ಗೋಶಾಲೆಗಳನ್ನು ಸ್ಥಾಪಿಸಿ ಗೋ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿ ಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಆನೆಗುಂದಿ ಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಗೋಹತ್ಯೆ ನಿಷೇದಿಸುವಂತೆ ಆಗ್ರಹಿಸಿದರು.
ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ವಿಎಚ್‌ಪಿ ನಾಯಕ ಎಂ.ಬಿ. ಪುರಾಣಿಕ್, ಗೋ ಆಂದೋಲನಾ ಸಮಿತಿಯ ರಾಘವೇಂದ್ರ ಆಚಾರ್ಯ, ರಘುಪತಿ ತಂತ್ರಿ, ಹರೀಶ್ ರಾಮ್, ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗ ದಳ ಮಂಗಳೂರು ವಿಭಾಗ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.