ಪಡುಬಿದ್ರಿ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಮಸೀದಿಗೆ ಕಲ್ಲು ತೂರಾಟ

Update: 2017-02-26 14:41 GMT

ಪಡುಬಿದ್ರಿ, ಫೆ.26: ರಾಜಿಯಲ್ಲಿ ಇತ್ಯರ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಶನಿವಾರ ರಾತ್ರಿ ಠಾಣೆಗೆ ನುಗ್ಗಲು ಯತ್ನಿಸಿದ್ದು, ರವಿವಾರ ಮತ್ತೆ ರಸ್ತೆ ತಡೆನಡೆಸಿದ್ದು, ಮುದರಂಗಡಿಯ ಮಸೀದಿಗೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

 ಘಟನೆಯ ವಿವರ:

ಶನಿವಾರ ಸಂಜೆಯ ವೇಳೆ ಅಕ್ಕಿ ಮೂಟೆ ಸಾಗಿಸುತ್ತಿದ್ದ ಈಚರ್ ಲಾರಿ ಚಾಲಕ ಹಾರ್ನ್ ಶಬ್ದ ಮಾಡಿದ ಬಗ್ಗೆ ಪ್ರಶ್ನಿಸಿ ಸ್ಥಳೀಯನಾದ ಆರೀಸ್ ಮತ್ತು ಸಲ್ಮಾನ್ ಎಂಬವರು ಇತರ ಇಬ್ಬರೊಂದಿಗೆ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿಲಾಗಿದೆ. ಅಲ್ಲದೆ ಈ ಬಗ್ಗೆ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜ ಅವರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯಾಗಿ ಸುಖಾಂತ್ಯಗೊಂಡಿತ್ತು.

ಆದರೆ, ಸಂಜೆ ಪಡುಬಿದ್ರಿ ಠಾಣೆಯಲ್ಲಿ ಸುಮಾರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂ ಜಾಗರಣ ವೇದಿಕೆ, ಸಂಚಾಲಕ ಪ್ರಶಾಂತ್ ನಾಯಕ್, ಜಿಲ್ಲಾ ಹಿಂದೂ ಮಹಾಸಭಾ ಸಂಚಾಲಕಿ ಅಂಬಿಕಾ ನಾಯಕ್, ಪ್ರತಿಭಟನಾಕಾರ ಮುಖಂಡ ರಾಯೇಶ್ ಪೈ, ವಿನೋದ್ ಅಡ್ವೆ, ಕಿರಣ್ ರಾವ್ ಮತ್ತಿತರರು ಮತ್ತಿತರರು ಸೇರಿ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಬೇಕು ಎಂದು ಪಟ್ಟುಹಿಡಿದರು. ಈ ವೇಳೆ ಪೊಲೀಸರು ಮತ್ತು ಹಿಂದೂಜಾಗರಣ ವೇದಿಕೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಆದರೆ ಪ್ರಕರಣ ದಾಖಲಿಸದೆ ಬಂಧಿಸಲು ಆಗುವುದಿಲ್ಲ ಎಂದು ಪೊಲೀಸರು ಹೇಳಿದರೂ ಕಾರ್ಯಕರ್ತರು ಅವರ ಮಾತನ್ನು ಕೇಳದೆ ಕೂಡಲೇ ಬಂಧಿಸಲೇ ಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಸಹಿತ ಅವರನ್ನು ಮನವೊಳಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಅಲ್ಲದೆ ರಾಜಕೀಯ ನಾಯಕರು ಈ ವಿಷಯಕ್ಕೆ ಬರಬಾರದು ಎಂದು ಹೇಳುವ ಮೂಲಕ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾಪು ಸರ್ಕಲ್ ಹಾಲಮೂರ್ತಿ, ಪಡುಬಿದ್ರಿ ಎಸ್‌ಐ ಸತೀಶ್ ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರು. ಆದರೆ ಇದಕ್ಕೂ ಜಗ್ಗದ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಎಎಸೈ ಕಮಲಾಕ್ಷ ಸಹಿತ ಇತರ ಪೊಲೀಸರು ತಡೆಯೊಡ್ಡಿದರು.
ಇದರಿಂದ ಅಸಮಾಧಾನಗೊಂಡು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಎಎಸ್ಪಿ ವಿಷ್ಣುವರ್ಧನ್ ಅವರು ಠಾಣೆಗೆ ಆಗಮಿಸಿ ಸಮಾಧಾನ ಪಡಿಸಿದರು.

ದೂರು ದಾಖಲು:

ರಾಜಿಯಲ್ಲಿ ಇತ್ಯರ್ಥಗೊಂಡರೂ ಬಳಿಕ ಹಿಂಜಾವೇ ಕಾರ್ಯಕರ್ತರ ಒತ್ತಾಯದ ಬಳಿಕ ಹಲ್ಲೆಗೊಳಗಾದ ಸಾಸ್ಥಾನ ನಿವಾಸಿ ಭಾಸ್ಕರ (38) ಮತ್ತು ಶಂಕರ ಎಂಬವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಯಿತು.

ಪೊಲೀಸರು ಅಲ್ಲಿಗೆ ತೆರಳಿ ದೂರು ಸ್ವೀಕರಿಸಿ ಬಳಿಕ ಪ್ರಕರಣ ದಾಖಲಿಸಿಕೊಂಡರು. ಪ್ರಕರಣಕ್ಕೆ ಸಂಬಂಧಿಸಿ ಹಾರೀಸ್ ಮತ್ತಿತರರು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಸ್ತೆ ತಡೆ:

ರವಿವಾರ ಬೆಳಿಗ್ಗೆ 10ರ ವೇಳೆಗೆ ಹಿಂದೂ ಜಾಗರಣ ವೇದಿಕೆ  ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪಡುಬಿದ್ರಿ ಠಾಣೆಗೆ ಮತ್ತೊಮ್ಮೆ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಮತ್ತು ಆಕ್ರೋಶಿತರ ಮಧ್ಯೆ ಮಾತಿನಚಕಮಕಿ ನಡೆಯಿತು.

ಬಳಿಕ ಕಾರ್ಯಕರ್ತರು ಹಠಾತ್ ಆಗಿ ಹೆದ್ದಾರಿಗೆ ಆಗಮಿಸಿ ರಸ್ತೆ ಮಧ್ಯೆ ಬ್ಯಾರಿಕೇಡ್, ಕಲ್ಲು ಅಡ್ಡಲಾಗಿ ಇಟ್ಟು ರಸ್ತೆ ತಡೆ ಮಾಡಿದರು. ಈ ಸಂದರ್ಭ ಸುಮಾರು 15 ನಿಮಿಷಗಳ ಕಾಲ ಸಂಪೂರ್ಣವಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೆಲವು ಸಂಘಟನಾ ಮುಖಂಡರ ಮಧ್ಯ ಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.

ರಸ್ತೆ ತಡೆಯ ಬಳಿಕ ಮಧ್ಯಾಹ್ನ ಎರಡು ಘಂಟೆಯ ವೇಳೆಗೆ ಮತ್ತೊಮ್ಮೆ ಪಡುಬಿದ್ರಿ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರನ್ನು ತಡೆದ ಪೊಲೀಸರು ಒಬ್ಬ ಆರೋಪಿ ಆರೀಸ್ ಎಂಬಾತನನ್ನು ಬಂಧಿಸಲಾಗಿದೆ ಹಾಗೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿ ಪ್ರತಿಭಟನೆ ಕೈಬಿಡುವಂತೆ ವಿನಂತಿಸಿದರು.

ಆದರೆ ಪೊಲೀಸರು ನಮ್ಮ ದಾರಿ ತಪ್ಪಿಸಿದ್ದಾರೆ, ಬಂಧನವೆಲ್ಲಾ ಬರೇ ನಾಟಕ, ಏಟಿಗೆ ಎದುರೇಟು ಜವಾಬು ಎಂದು ಪಟ್ಟು ಬಿಡಿದ ಕಾರ್ಯಕರ್ತರು ತಮ್ಮ ಪ್ರತಿಭಟನೆ ಕೈಬಿಟ್ಟರು.

ಬಳಿಕ ಬೈಕ್‌ಗಳಲ್ಲಿ ನಂದಿಕೂರಿನತ್ತ ತೆರಳಿದ ಕಾರ್ಯಕರ್ತರು ಮುದರಂಗಡಿಯ ಸುನ್ನಿ ಜಾಮಿಯಾ ಮಸೀದಿಗೆ ಕಲ್ಲುತೂರಾಟ ನಡೆಸಿದರು.

ಬಳಿಕ ಪೊಲೀಸರು ಮುದರಂಗಡಿ ಮತ್ತು ನಂದಿಕೂರು ಪ್ರದೇಶದಿಂದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದು, ಹಲವಾರು ಬೈಕು, ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ವೈಫಲ್ಯವೇ ?
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಶನಿವಾರ ಸಂಜೆ 7ರಿಂದ ರಾತ್ರಿ 12.30ರವರರೆಗೂ ಪೊಲೀಸರಿಗೆ ಸವಾಲೆಸೆದು ಪ್ರತಿಭಟನೆ ನಡೆಸುತಿದ್ದರು. ಅಲ್ಲದೆ ಠಾಣೆಯ ಒಳಗಡೆ ಮುನ್ನುಗ್ಗುವ ಯತ್ನ ನಡೆಸಿದರು.

ಆ ಬಳಿಕವೂ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದು ಮಾತ್ರವಲ್ಲದೆ ಬ್ರಹ್ಮಸ್ಥಾನದಲ್ಲಿ ನಡೆಯುವ ಡಕ್ಕೆಬಲಿ ಸೇವೆಗೆ ತೆರಳುವ ಭಕ್ತರ ವಾಹನಗಳಿಗೂ ತಡೆಯೊಡ್ಡಿದರು. ಆದರೂ ಪೊಲೀಸರು ಮಾತ್ರ ಮೂಕಪ್ರೇಕ್ಷಕರಾದರು.

ಇಂದು (ರವಿವಾರ) ಬೆಳಗ್ಗೆಯಿಂದ ಎರಡೆರಡು ಸಲ ಠಾಣೆಗೆ ಮುತ್ತಿಗೆ ಹಾಕಿದ್ದು ಮಾತ್ರವಲ್ಲದೆ ಹೆದ್ದಾರಿ ತಡೆ ನಡೆಸುವಾಗಲೂ ಪೊಲೀಸರ ಕ್ರಮಕೈಗೊಳ್ಳಲಿಲ್ಲ. ನಿನ್ನೆ ರಾತ್ರಿಯೇ(ಶನಿವಾರ) ಕ್ರಮಕೈಗೊಂಡಲ್ಲಿ ಬೆಳಗ್ಗೆ ಯಾವುದೇ ಘಟನೆ ನಡೆದಿರುತಿರಲಿಲ್ಲ. ಮುದರಂಗಡಿ ಮಸೀದಿಗೂ ಕಲ್ಲು ತೂರಾಟ ಆಗುತಿರಲಿಲ್ಲ. ಇದು ಪೊಲೀಸರ ವೈಫಲ್ಯ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಗಿದ ಬಳಿಕ ಬಂದೋಬಸ್ತ್:
ಪಡುಬಿದ್ರಿ, ಮುದರಂಗಡಿಯಾದ್ಯಂತ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಪಡುಬಿದ್ರಿ 16 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ 4 ಸಿಐ, 1 ಡಿವೈಎಸ್ಪಿ ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದ್ದು ಮುಂದಿನ ಕೆಲ ದಿನಗಳವರೆಗೆ ಬಂದೋಬಸ್ತ್ ಮುಂದುವರಿಯಲಿದೆ ಎಂದು ಎಎಸ್ಪಿ  ವಿಷ್ಣುವರ್ಧನ್ ತಿಳಿಸಿದ್ದಾರೆ.

ಮಸೀದಿಯ ಆಡಳಿತ ಸಮಿತಿಯಿಂದ ದೂರು ದಾಖಲು:

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮುದರಂಗಡಿಯ ಮಸೀದಿಗೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ಮಸೀದಿಯ ಆಡಳಿತ ಸಮಿತಿ ಪಡುಬಿದ್ರಿ ಠಾಣೆಗೆ ದೂರು ನೀಡಿದೆ.

ಇಲ್ಲಿನ ಸುನ್ನೀ ಜಾಮಿಯಾ ಮಸೀದಿಯ ಆವರಣಕ್ಕೆ ಮದ್ಯಾಹ್ನ ಸುಮಾರು 2:30ರ ವೇಳೆಗೆ ರಾಯೇಶ್ ಪೈ ಮೂಡುಪಲಿಮಾರು, ಲೋಕೇಶ್ ರಾಜೀವ್ ನಗರ, ಕಿರಣ್ ಭಟ್, ವಿನೋದ್ ಶೆಟ್ಟಿ ಅಡ್ವೆ ಸಣ್ಣೋನಿ, ಪ್ರತೀಕ್ ಶೆಟ್ಟಿ, ಜ್ಞಾನೇಶ್ ವಿದ್ಯಾನಗರ, ಪ್ರಜ್ಞೇಶ್, ಜಿತೇಶ್ ಸಾಂತೂರು, ಸತೀಶ್ ಶೆಟ್ಟಿ ಪಿಲಾರು ಸಹಿತ ಸುಮಾರು 25ದಿಂದ 30ಜನರ ಗುಂಪು ದೊಣ್ಣೆ, ಕಲ್ಲುಗಳೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಹಾಗೂ ಇತರ ವಾಹನಗಳಲ್ಲಿ ಆಗಮಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಸೀದಿಯೊಳಗಿರುವವರನ್ನು ಸುಟ್ಟು ಹಾಕುತ್ತೇವೆ, ಮಸೀದಿ ಧ್ವಂಸಗೊಳಿಸುತ್ತೇವೆಂದು ಹೇಳುತ್ತಾ ಮಸೀದಿಯ ಆವರಣದೊಳಗೆ ಕಲ್ಲು ತೂರಾಟ ನಡೆಸಿ ಕಂಪೌಂಡ್ ಗೇಟಿನ ಲೈಟುಗಳನ್ನು ಹಾನಿಗೊಳಿಸಿದ್ದಾರೆ.

ಅಲ್ಲದೆ, ಸಂಜೆಯೊಳಗೆ ಈ ಮಸೀದಿಯನ್ನು ನಾಶಪಡಿಸುತ್ತೇವೆಂದು ಬೆದರಿಕೆಯೊಡ್ಡಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ತಡೆದು ಮಸೀದಿಗೆ ಆಗಬಹುದಾಗಿದ್ದ ದೊಡ್ಡ ನಷ್ಟವನ್ನು ತಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಮಸೀದಿಯ ಅಧ್ಯಕ್ಷ ಶೇಖ್ ಮನ್ನಾ ಸಾಹೇಬ್ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News