×
Ad

ದ.ಕ. ಜಿಲ್ಲೆಯಲ್ಲಿ ಸರಕಾರಿ ನಗರ ಸಾರಿಗೆ ಬಸ್ ಸಂಚಾರ: ರೈ ಇಂಗಿತ

Update: 2017-02-26 23:37 IST

 ಮಂಗಳೂರು, ಫೆ.26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಜೊತೆ ಪರ್ಯಾಯವಾಗಿ ನಗರ ಸರಕಾರಿ ಸಾರಿಗೆ ಬಸ್ ಓಡಿಸಲು ಸಾರ್ವಜನಿಕರ ಬೇಡಿಕೆ ಇದೆ. ಈ ಬಗ್ಗೆ ತಾನು ಆಸಕ್ತಿ ಹೊಂದಿರುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬಂದ್ ಕರೆಯ ಹಿನ್ನೆಲೆ ಯಲ್ಲಿ ಶನಿವಾರ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮಂಗಳೂರಿಗೆ ಇನ್ನಷ್ಟು ಸರಕಾರಿ ನಗರ ಸಾರಿಗೆ ಬಸ್‌ಗಳ ಅಗತ್ಯವಿದೆ ಎಂದರು.

 ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಹೆಚ್ಚು ಇರುವ ಕಾರಣ ಹರತಾಳದ ಕರೆಯ ಸಂದರ್ಭದಲ್ಲಿ ಬಸ್ ಓಡಾಟಸ್ಥಗಿತಗೊಳಿಸಿದ್ದರಿಂದ ಸಾರ್ವ ಜನಿಕರು, ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಸರಕಾರಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಸೇವೆ ನೀಡಿವೆ. ಖಾಸಗಿ ಬಸ್‌ಗಳು ಕೂಡಾ ಸಾರ್ವಜನಿಕ ಸೇವೆ ನೀಡಲು ಮುಂದಾಗಬೇಕಿತ್ತು. ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಆರ್‌ಟಿಒ ಕೂಡಾ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಆರ್‌ಟಿಒ ಮೇಲೆ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಅವರು ತಿಳಿಸಿದರು.

   ಹರತಾಳ, ಬಂದ್ ಸಂದರ್ಭದಲ್ಲಿ ಉಂಟಾಗುವ ನಷ್ಟವನ್ನು ಬಂದ್‌ಗೆ ಕರೆ ನೀಡಿದವರಿಂದಲೇ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಸೂಚಿಸುತ್ತೇನೆ ಎಂದವರು ಸ್ಪಷ್ಟಪಡಿಸಿದರು.

ಆನೆ ತಡೆ ಬೇಲಿಗೆ 250 ಕೋ.ರೂ.

ಅರಣ್ಯ ಇಲಾಖೆಗೆ ಪ್ರಥಮ ಬಾರಿಗೆ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯ ನೇಮಕಾತಿ ಆಗಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಅರಣ್ಯ ಇಲಾಖೆ ಹೆಚ್ಚು ಸೌಕರ್ಯಗಳನ್ನು ಹೊಂದಿವೆ.ಆನೆಗಳ ಹಾವಳಿ ತಡೆಯಲು ರೈಲು ಹಳಿಯ ಕಬ್ಬಿಣ ಬಳಸಿ ತಡೆ ಬೇಲಿ ನಿರ್ಮಿಸಲು 250 ಕೋ.ರೂ. ಯೋಜನೆಯನ್ನು ರೂಪಿಸಲಾಗಿದೆ.

 ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ

 ಸಚಿವ ಸಂಪುಟದ ಪುನಾರಚನೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರೈ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ.

----------------------------------------------------

 ಸಂವಿಧಾನ ವಿರೋಧಿಗಳ ಬಗ್ಗೆ ಖಾದರ್ ಹೇಳಿಕೆ

ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಶನಿವಾರ ನೀಡಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ರೈ, ಸಂವಿಧಾನಕ್ಕೆ ಅಪಚಾರ ಎಸಗುವವರಿಗೆ, ಮಹಾತ್ಮ ಗಾಂಧಿಯ ಹತ್ಯೆಯಾದಾಗ ಸಿಹಿ ಹಂಚಿ ಸಂಭ್ರಮಿಸಿದವರಿಗೆ ಖಾದರ್ ಅವರ ಹೇಳಿಕೆ ಸರಿಯಾಗಿಯೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News