ತೂತುಕ್ಕುಡಿ: ಸಮುದ್ರದಲ್ಲಿ ದೋಣಿ ಮುಳುಗಿ 9 ಪ್ರವಾಸಿಗರ ಧಾರುಣ ಮೃತ್ಯು
ಮದುರೈ,ಫೆ.26: ತಮಿಳುನಾಡಿನ ತೂತುಕ್ಕುಡಿ ಜಿಲ್ಲೆಯ ಮನಪಾಡ್ ಸಮೀಪದ ಸಮುದ್ರದಲ್ಲಿ ರವಿವಾರ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ದೋಣಿಯೊಂದು ಮುಳುಗಿ, ಕನಿಷ್ಠ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ. ಸಮುದ್ರಪಾಲಾದ ದೋಣಿಯಲ್ಲಿದ್ದ ಹತ್ತು ಮಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದ ಇತರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇಂದು ಸಂಜೆ 5:30ರ ವೇಳೆಗೆ ಮನಪಾಡ್ ಬೀಚ್‌ಗೆ ಆಗಮಿಸಿದ್ದ ಪ್ರವಾಸಿಗರ ತಂಡವೊಂದು, ಸ್ಥಳೀಯ ಮೀನುಗಾರರ ಫೈಬರ್ ಮೀನುಗಾರಿಕಾ ದೋಣಿಯಲ್ಲಿ ಸಮುದ್ರವಿಹಾರಕ್ಕೆ ತೆರಳಿದ್ದರು. ಸಮುದ್ರ ಮಧ್ಯೆ ಬಲವಾದ ಅಲೆಯೊಂದು ಅಪ್ಪಳಿಸಿದ್ದರಿಂದ ದೋಣಿ ಬುಡಮೇಲಾಗಿ ಮಗುಚಿತ್ತು. ದೋಣಿಯಲ್ಲಿದ್ದವರು ಅಕ್ರಂಧನವನ್ನು ಕೇಳಿ ಕೂಡಲೇ ಧಾವಿಸಿ ಬಂದ ಮೀನುಗಾರರು 10 ಮಂದಿಯನ್ನು ನೀರಿನಿಂದ ಹೊರಗೆಳೆದರು. ಉಳಿದ 9 ಮಂದಿಯ ಶವಗಳನ್ನು ಅವರು ಮೇಲೆತ್ತಿದ್ದಾರೆ. ದೋಣಿಯಲ್ಲಿದ್ದ ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ.
ಸ್ಥಳಕ್ಕೆ ನೌಕಾಪೊಲೀಸ್‌ಪಡೆ, ಅಗ್ನಿಶಾಮಕ ದಳ ಆಗಮಿಸಿದ್ದು, ನಾಪತ್ತೆಯಾದವರ ಶೋಧಕಾರ್ಯಾಚರಣೆಯಲ್ಲಿ ತೊಡಗಿದೆ.