ಡಿಸಿ ಮನ್ನಾ ಜಾಗದಲ್ಲಿ ಅಕ್ರಮ: ಸೂಕ್ತ ಕ್ರಮಕ್ಕೆ ಆಗ್ರಹ
ಬೆಳ್ತಂಗಡಿ, ಫೆ.26: ತಾಲೂಕಿನಲ್ಲಿರುವ ಡಿ.ಸಿ. ಮನ್ನಾ ಜಮೀನು ಅಕ್ರಮವಾಗಿದೆ. ಸಾಕಷ್ಟು ಡಿಸಿ ಮನ್ನಾ ಜಮೀನನ್ನು ಇತರ ಉದ್ದೇಶಗಳಿಗೆ ಉಪಯೋಗಿಸಲಾಗಿದೆ. ಅಕ್ರಮವಾಗಿರುವ ಜಮೀನನ್ನು ಮರಳಿ ಪಡೆಯಲು ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಪ್ರಶ್ನೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಕೇಳಿಬಂತು. ಸಭೆಯಲ್ಲಿ ಈ ಬಗ್ಗೆ ಗಮನಸೆಳೆದ ಶೇಖರ ಲಾಯಿಲ, ಈ ಬಗ್ಗೆ ಅಕ್ರಮಣಕಾರರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಸುಮಾರು ಎರಡು ಸಾವಿರ ಎಕ್ರೆ ಡಿಸಿಮನ್ನಾ ಜಮೀನಿದ್ದು ಇದನ್ನು ವಶಪಡಿಸಿ ಭೂರಹಿತ ದಲಿತ ಕುಟುಂಬಗಳಿಗೆ ಹಂಚಬೇಕು ಎಂದು ಸಭೆಯಲ್ಲಿದ್ದ ದಲಿತರು ಒತ್ತಾಯಿಸಿದರು.. ಗ್ರಾಪಂ ಕಚೇರಿಯಲ್ಲಿ ಬೆಂಕಿ ಪ್ರಕರಣ:ಸೂಕ್ತ ತನಿಖೆಗೆ ಒತ್ತಾಯ
ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಇತ್ತೀಚೆಗೆ ಲೆಕ್ಕ ಪರಿಶೋಧನೆಯ ಹಿಂದಿನ ದಿನ ಬೆಂಕಿ ಕಾಣಿಸಿಕೊಂಡು ಕಡತಗಳು ಸುಟ್ಟು ಹೋಗಿರುವ ಬಗ್ಗೆ ಪ್ರಸ್ತಾಪಿಸಿದ ನಾಗರಾಜ ಲಾಯಿಲ, ಇದು ವ್ಯವಸ್ಥಿತವಾಗಿ ಮಾಡಿರುವ ಸಂಚು. ಬೆಂಕಿ ಅನಾಹುತಕ್ಕೆ ಶಾರ್ಟ್‌ಸರ್ಕ್ಯೂಟ್ ಕಾರಣವಲ್ಲ ಎಂದು ಮೆಸ್ಕಾಂ ಇಲಾಖೆ ಸ್ಪಷ್ಟಪಡಿಸಿದೆ. ಬಿಎಸ್ಸೆನ್ನೆಲ್‌ನವರೂ ತಮ್ಮ ವ್ಯವಸ್ಥೆಯಲ್ಲಿ ಯಾವುದೇ ನ್ಯೂನತೆಯಿರುವುದು ಕಂಡುಬರುವುದಿಲ್ಲ ಹಾಗೂ ಬೆಂಕಿಗೆ ದೂರವಾಣಿ ಸಂಪರ್ಕ ಕಾರಣ ಅಲ್ಲ ಎಂದಿದ್ದಾರೆ. ಹೀಗಿರುವಾಗ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಆದರೆ ಘಟನೆ ನಡೆದು ತಿಂಗಳುಗಳೇ ಕಳೆದಿದ್ದರೂ ತನಿಖೆ ಯಾವ ಹಂತದಲ್ಲಿದೆ ಎಂಬುದು ತಿಳಿದಿಲ್ಲ. ಇದಕ್ಕೆ ಉತ್ತರಿಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ರವೀಶ್‌ರಿಗೆ ಸೂಚಿಸಿದರು. ಅಟ್ರಿಂಜೆಯ ಕೊರಗ ಕುಟುಂಬಗಳ ಸಂಕಷ್ಟಗಳ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದಿದ್ದರೂ ಇನ್ನೂ ಅವರಿಗೆ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಮೂಲಭುತ ಸೌಕರ್ಯಗಳನ್ನು ಕಲ್ಪಿಸಿಲ್ಲ, ಬದಲಿ ವ್ಯವಸ್ಥೆಯೂ ಮಾಡಿಲ್ಲ ಎಂದು ಶೇಖರ ಲಾಯಿಲ ಸಭೆಯ ಗಮನಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಅಟ್ರಿಂಜೆಯ ಕೊರಗ ಕುಟುಂಬಗಳಿಗೆ ಅವರಿರುವ ಸ್ಥಳದಲ್ಲೇ ಜಮೀನು ನೀಡಲು ಸಾಧ್ಯವಾಗುವುದಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಂದ ಹೊರ ಬರಲು ಅವರೂ ಸಿದ್ಧರಿಲ್ಲ. ಅವರು ಅಲ್ಲಿಂದ ಹೊರಬರಲು ಸಿದ್ಧರಾದರೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಸಭೆಯಲ್ಲಿ ಡಿವೈಎಸ್ಪಿ ರವೀಶ್ ಸಿ.ಆರ್., ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಸಮಾಜ ಕಲ್ಯಾಣಾಧಿಕಾರಿ ಮೋಹನ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ ಹಾಗೂ ಇತರೆ ಅಧಿಕಾರಿಗಳು, ದಲಿತ ದೌರ್ಜನ್ಯ ಸಮಿತಿಯ ಸದಸ್ಯ ಸಂಜೀವ ನೆರಿಯ ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯಲ್ಲಿ ಮುಂದಿನ ತಿಂಗಳಿನಿಂದ ಪೊಲೀಸ್ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಒಂದು ಗ್ರಾಮದ ಜವಾಬ್ದಾರಿಯನ್ನು ಓರ್ವ ಪೊಲೀಸ್ ಪೇದೆಗೆ ವಹಿಸುವ ಮೂಲಕ ಜನಸ್ನೇಹಿಯಾದ ಪೊಲೀಸ್ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನ ನಡೆಸಲಾಗುವುದು. ಇದನ್ನು ಪ್ರಾಯೋಗಿಕವಾಗಿ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ಠಾಣೆಗಳಲ್ಲಿ ಜಾರಿಗೆ ತರಲಾಗುತ್ತಿದೆ. ಬೆಳ್ತಂಗಡಿಗೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದ್ದು, ಅದರ ವ್ಯಾಪ್ತಿಯ ಬಗ್ಗೆ ನಿರ್ಧಾರವಾಗಿಲ್ಲ. ಎಲ್ಲಿ ಠಾಣೆಯನ್ನು ಆರಂಭಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಂಡು ಬಳಿಕ ಮಾರ್ಚ್ ಅಂತ್ಯದೊಳಗೆ ಠಾಣೆ ಕಾರ್ಯಾರಂಭಗೊಳ್ಳಲಿದೆ.
-ಗುಲಾಬ್ ರಾವ್ ಬೊರಸೆ, ದ.ಕ. ಜಿಲ್ಲಾ ಎಸ್ಪಿ