×
Ad

ಮೂವತ್ತು ವರ್ಷಗಳಿಂದ ಪಾಳು ಬಿದ್ದಿದ್ದ ಮಸೀದಿ ದುರಸ್ತಿ ಮಾಡಿಕೊಟ್ಟ ಹಿಂದೂಗಳು

Update: 2017-02-27 00:17 IST

ಅಹ್ಮದಾಬಾದ್,ಫೆ.26: ಯಾವುದೇ ದಂಗೆ, ಪ್ರಚೋದನೆಯಿರಲಿ....ಅದು ಭಾರತೀಯರ ಹೃದಯಗಳಲ್ಲಿನ ಮಾನವೀಯತೆಯನ್ನು ನಿಜವಾಗಿಯೂ ಅಳಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕಾಲುಪುರದ ಬಕ್ರಿ ಪೋಳ್ ಸಮೀಪದ ಮಸೀದಿಯಿಂದ ಕಳೆದ ವರ್ಷ ಮಾರ್ಚ್‌ನಲ್ಲಿ ಮೊಳಗಿದ್ದ ನಮಾಝ್ ಕರೆ ಸಾಮಾನ್ಯ ಅಝಾನ್ ಆಗಿರಲಿಲ್ಲ. 30 ವರ್ಷಗಳ ಸುದೀರ್ಘ ವಿರಾಮದ ಬಳಿಕ ಈ ಮಸೀದಿಯಿಂದ ಕೇಳಿ ಬಂದಿದ್ದ ಈ ಅಝಾನ್ ದ್ವೇಷವನ್ನು ತೊಡೆದುಹಾಕುವ ಅನುಕಂಪ ಮತ್ತು ಗೌರವದ ಸಂಕೇತವಾಗಿತ್ತು.

ಹಿಂದು ಮತ್ತು ಮುಸ್ಲಿಮ್‌ರು ವಾಸವಾಗಿರುವ ಕಾಲುಪುರ ಪ್ರದೇದಲ್ಲಿ 1984ರ ಕೋಮುಗಳಭೆಯಲ್ಲಿ ರಕ್ತವು ನೀರಿನಂತೆ ಹರಿದಿತ್ತು. ನೂರು ವರ್ಷಗಳಷ್ಟು ಹಳೆಯದಾದ ಮಸೀದಿ ಹಿಂದುಗಳ ವಸತಿ ಪ್ರದೇಶದ ಮಧ್ಯೆ....ರಾಮ್‌ಜಿ,ನಾಗ್ದಲ್ಲಾ ಹನುಮಾನ್ ಮತ್ತು ಶೇಷ ನಾರಾಯಣ ದೇವಸ್ಥಾನಗಳ ಸಮೀಪವಿದ್ದರಿಂದ ಮುಸ್ಲಿಮರು ಸುಮ್ಮನೆ ತೊಂದರೆಯನ್ನು ಎದುರು ಹಾಕಿಕೊಳ್ಳುವುದೇಕೆಂದು ಭಾವಿಸಿ ನಮಾಝ್‌ಗೆ ಆ ಮಸೀದಿಗೆ ಹೋಗುವುದನ್ನೇ ಬಿಟ್ಟಿದ್ದರು.

1993ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಕೋಮು ಧ್ರುವೀಕರಣ ಹೆಪ್ಪುಗಟ್ಟಿತ್ತು. ಆ ವೇಳೆಗಾಗಲೇ ಕಾಲುಪುರ ಮಸೀದಿಯ ಸುತ್ತ ಗಿಡಗಂಟಿಗಳು ಬೆಳೆದು ಗೋಡೆಗಳು ಶಿಥಿಲಗೊಂಡು ಈಗಲೋ ಆಗಲೋ ಬೀಳುವಂತಾಗಿತ್ತು.

2002ರ ಕೋಮು ಗಲಭೆಗಳ ನಂತರ ಮಸೀದಿಯ ಸುತ್ತ ವಾಸವಿರುವವರಲ್ಲಿ ಅದನ್ನು ಉಳಿಸಬೇಕೆಂಬ ಸಾಮೂಹಿಕ ಇಚ್ಛೆ ಹುಟ್ಟಿಕೊಂಡಿತ್ತು. ತಮ್ಮ ಮುಸ್ಲಿಮ್ ಬಾಂಧವರೊಂದಿಗೆ ಮಾತುಕತೆ ನಡೆಸಿದ ಹಿಂದುಗಳು ಮಸೀದಿ ಪರಿಸರವನ್ನು ಸ್ವಚ್ಛಗೊಳಿಸಿ, ವಂತಿಗೆ ಸಂಗ್ರಹಿಸಿ ಅದರ ದುರಸ್ತಿಯನ್ನೂ ಮಾಡಿಸಿದರು. 201ರ, ಮಾರ್ಚ್‌ನಲ್ಲಿ ಮಸೀದಿ ಪುನರಾರಂಭಗೊಂಡಿತ್ತು. ಇದೀಗ ,ಒಂದು ವರ್ಷದ ಬಳಿಕ ಮಸೀದಿಯ ಪುನರ್‌ನಿರ್ಮಾಣ ಪ್ರಯತ್ನ ಉಭಯ ಸಮುದಾಯಗಳ ಮಧ್ಯೆ ಗಾಢ ಅನುಬಂಧವನ್ನು ಬೆಸೆದಿದೆ ಎನ್ನುವುದನ್ನು ಸ್ಥಳೀಯರು ದೃಢಪಡಿಸಿದ್ದಾರೆ. ಎಷ್ಟರ ಮಟ್ಟಿಗೆಂದರೆ ಮಸೀದಿಯ ಚಾವಿಗಳ ಒಂದು ಸೆಟ್ ಅನ್ನು ಹಿಂದುಗಳ ವಶಕ್ಕೆ ನೀಡಲಾಗಿದೆ.

ಮಸೀದಿಯ ಬಳಿ ಹೂವುಗಳನ್ನು ಮಾರುತ್ತಿರುವ ಪೂನಂ ಪಾರೇಖ್ ಮತ್ತು ಕೌಶಿಕ್ ರಾಮಿ ಬಳಿ ಮಸೀದಿಯ ಚಾವಿಯಿದೆ ಎಂದು ದರಿಯಾಪುರದ ಸಾಮಾಜಿ ಕಾರ್ಯಕರ್ತ ಅಝೀಝ್ ಗಾಂಧಿ ತಿಳಿಸಿದರು.

ಮಸೀದಿಯ ಬಳಿ ದಿನವೂ ಎರಡು ಬಾರಿ ಅಗರಬತ್ತಿ ಹಚ್ಚುತ್ತಿರುವ ರಾಮಿ, ಮೂರು ದಶಕಗಳಿಂದ ಬಂದ್ ಆಗಿದ್ದ ಮಸೀದಿ ಈಗ ಭಕ್ತರಿಂದ ತುಂಬಿರುವುದು ನಮಗೆ ತುಂಬ ಸಂತಸವನ್ನುವನ್ನುಂಟು ಮಾಡಿದೆ ಎನ್ನುತ್ತಾರೆ.

ಹಾಜಿ ಉಸ್ಮಾನ್ ಗನಿ ಮತ್ತು ಮಸೀದಿಯ ಇತರ ಟ್ರಸ್ಟಿಗಳೊಂದಿಗೆ ಸೇರಿಕೊಂಡು ನಾವು ಮಸೀದಿಯ ನವೀಕರಣ ಮಾಡಿದ್ದೇವೆ ಎನ್ನುತ್ತಾರೆ ನಾಗ್ದಲ್ಲಾ ಹನುಮಾನ ದೇವಸ್ಥಾನದ ಅರ್ಚಕ ಚಂದ್ರಕಾಂತ ಶರ್ಮಾ.

ಈ ಹಿಂದೆ ಮುಸ್ಲಿಮ್ ಯುವಕರು ಪ್ರಾರ್ಥನೆಗೆ ಬೇರೆ ಕಡೆಗೆ ಹೋಗಬೇಕಾಗಿತ್ತು. ಈಗ ಅವರೆಲ್ಲ ಇಲ್ಲಿಯೇ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ ಎಂದರು.

ಮಸೀದಿಯ ನವೀಕರಣಕ್ಕೆ ಕಾರ್ಮಿಕರನ್ನು ಕರೆತರುವಲ್ಲಿ ನಮ್ಮ ಹಿಂದು ಬಾಂಧವರು ನಮಗೆ ತುಂಬ ನೆರವಾಗಿದ್ದರು ಎಂದು ದರಿಯಾಪುರದ ನಿವಾಸಿ ಹಮೀದುಲ್ಲಾ ಶೇಖ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News