ದೇಶಪ್ರೇಮ ಮಾತಿನ ಸರಕಾಗಬಾರದು: ಪ್ರೊ. ಸುರೇಂದ್ರ ರಾವ್
ಮೂಡುಬಿದಿರೆ, ಫೆ.27: ‘ನಮ್ಮಲ್ಲಿ ರಾಷ್ಟ್ರೀಯತೆಯ ಪ್ರಜ್ಞೆ ಯಾವಾಗಲೂ ಜಾಗೃತವಾಗಿರಬೇಕು. ನಮ್ಮ ರಾಷ್ಟ್ರಪ್ರಜ್ಞೆ ಹೇಗಿರಬೇಕು, ಯಾವ ಚಿಂತನೆಗಳನ್ನು ಒಳಗೊಂಡಿರಬೇಕು ಎಂಬುದರ ಬಗ್ಗೆ ಕೆಲವರಿಗೆ ಸ್ಪಷ್ಟವಾದ ತಿಳುವಳಿಕೆಯಿರುತ್ತದೆ. ರಾಷ್ಟ್ರಪ್ರೇಮವು ನಮ್ಮಲ್ಲಿ ಅಂತರ್ಗತವಾಗಿ ಬಂದಿರುವಂತಹದ್ದು. ರಾಷ್ಟ್ರಪ್ರೇಮದ ಬಗ್ಗೆ ಯಾರೋ ಎಲ್ಲಿಯೋ ಕುಳಿತು ಮಾತನಾಡುವಂತಾಗಬಾರದು. ಯಾವಾಗಲೂ ನಮ್ಮ ಭಾಷೆ, ಉಡುಗೆ-ತೊಡುಗೆಗಳ ಆಧಾರದಲ್ಲಿ ನಮ್ಮ ಭಾರತೀಯತೆಯನ್ನು ಗುರುತಿಸಲಾಗುತ್ತದೆ. ಈ ಮೂಲಕ ಒಬ್ಬರ ರಾಷ್ಟ್ರ ಪ್ರೇಮವನ್ನು ತೀಕ್ಷ್ಣವಾಗಿ ಪರಿಶೋಧಿಸಲಾಗುತ್ತದೆ. ಯಾರು ಏನೇ ಹೇಳಿದರೂ, ‘ಆಧಾರ್’ನಂತಹ ಮಾನದಂಡಗಳಿದ್ದರೂ, ಇರದಿದ್ದರೂ ನಾನು ಭಾರತೀಯನೆಂಬ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಿರಬೇಕು. ದೇಶದ ಬಗ್ಗೆ, ದೇಶಪ್ರೇಮದ ಬಗ್ಗೆ ಚರ್ಚೆಗಳು ನಡೆಯಬೇಕು, ಜಿಜ್ಞಾಸೆಗಳು ಹುಟ್ಟಿಕೊಳ್ಳಬೇಕು. ಹಾಗಾದಾಗ ವ್ಯಕ್ತಿಯ ಜೊತೆ ದೇಶ ಕೂಡ ಬೆಳೆಯಲು ಸಾಧ್ಯ’ ಎಂದು ಪ್ರೊ. ಸುರೇಂದ್ರರಾವ್ ಹೇಳಿದರು.
ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಮಂಗಳೂರು ವಿವಿಯ ಕನ್ನಡ ಅಧ್ಯಾಪಕರ ಸಂಘ-‘ವಿಕಾಸ’ದ ಸಹಯೋಗದಲ್ಲಿ ನಡೆದ ‘ವರ್ತಮಾನದ ರಾಷ್ಟ್ರಪ್ರಜ್ಞೆ ಮತ್ತು ಸವಾಲುಗಳು’ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ರಾಷ್ಟ್ರಪ್ರೇಮದಲ್ಲಿ ಸಾಂಕೇತಿಕತೆಗೆ ತುಂಬಾ ಪ್ರಾಮುಖ್ಯತೆಯಿದೆ. ಅದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗುತ್ತದೆ. ನಮ್ಮ ರಾಷ್ಟ್ರಧ್ವಜವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ನಮ್ಮ ದೇಶದಲ್ಲಿ ಈ ಸಂಕೇತಕ್ಕೆ ಬಹುದೊಡ್ಡ ಗೌರವವಿದೆ. ನಮ್ಮ ದೇಶದಲ್ಲಿ ಸಂಸತ್ತು, ನ್ಯಾಯಾಲಯಗಳಲ್ಲಿ ಮಾತ್ರ ರಾಷ್ಟ್ರಧ್ವಜ ಸದಾಕಾಲ ಇರುತ್ತದೆ. ನಮ್ಮಲ್ಲಿ ರಾಷ್ಟ್ರಧ್ವಜದ ಬಳಕೆಗೂ ಕೆಲವು ನಿರ್ಬಂಧಗಳಿವೆ. ಆದರೆ ಅಮೇರಿಕದಂತಹ ದೇಶಗಳಲ್ಲಿ ರಾಷ್ಟ್ರಧ್ವಜದ ಬಳಕೆಗೆ ಯಾವುದೇ ಪರಿಮಿತಿಯಿಲ್ಲ. ಅದನ್ನು ಮನೆಗಳಲ್ಲೂ ಇಟ್ಟುಕೊಳ್ಳುತ್ತಾರೆ. ಅದರಿಂದ ಬಟ್ಟೆಗಳನ್ನೂ ಹೊಲಿಸಿಕೊಳ್ಳುತ್ತಾರೆ ಅವರಿಗೆ ಅದು ತಪ್ಪಾಗಿ ಕಾಣಿಸದು. ನಾನೇ ದೇಶವೆಂಬ ಭಾವನೆ ಅವರಲ್ಲಿದೆ. ಆದರೆ ರಾಷ್ಟ್ರಧ್ವಜದ ಬಗ್ಗೆ, ರಾಷ್ಟ್ರೀಯತೆಯ ಬಗ್ಗೆ ಯೋಚಿಸುವಾಗ ಯಾವಾಗಲೂ ಕೆಲವು ಗೌರವಾನ್ವಿತ ಪರಿಮಿತಿಯೊಳಗೆ ನಿರ್ವಚಿಸುವ, ನಿರ್ಬಂಧಿಸುವ ಅವಶ್ಯೆಕತೆಯಿದೆ’ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ರಾಷ್ಟ್ರಪ್ರೇಮವೆಂಬುದು ಒಂದು ದೇಶದ ಉಸಿರಿದ್ದಂತೆ. ದೇಶ ಬೆಳೆಯಬೇಕೆಂದರೆ ರಾಷ್ಟ್ರಪ್ರಜ್ಞೆ, ರಾಷ್ಟ್ರಾಭಿಮಾನ ಇರಲೇಬೇಕು. ನಮ್ಮ ದೇಶದ ಪ್ರಸ್ತುತ ಬೆಳವಣಿಗೆಯನ್ನು ಗಮನಿಸುತ್ತಿದ್ದರೆ ನಿಜವಾಗಿಯೂ ಭಯವಾಗುತ್ತದೆ. ನಮ್ಮ ದೇಶದ ಮುಂದೆ ಬಹುದೊಡ್ಡ ಸವಾಲುಗಳಿವೆ, ಗಂಡಾಂತರಗಳಿವೆ. ನಮ್ಮದೇ ರಾಜ್ಯಗಳನ್ನು ನಾವು ಸಂಶಯ ದೃಷ್ಟಿಯಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಸಂಕೇತಗಳಿಗೆ ಗೌರವ ನೀಡಬೇಕಾದ್ದು ನಮ್ಮ ಕರ್ತವ್ಯ. ಆದರೆ ಇಂದು ನಮ್ಮ ರಾಷ್ಟ್ರಧ್ವಜವನ್ನು, ರಾಷ್ಟ್ರಗೀತೆಯನ್ನು ಅವಮಾನಿಸುವ ಪ್ರವೃತ್ತಿ ಬೆಳೆಯುತ್ತಿದೆ. ಅತ್ಯುತ್ತಮ ರಾಷ್ಟ್ರೀಯ ನೀತಿಗಳು ಬಂದಾಗ ಅವುಗಳನ್ನು ತಿರಸ್ಕರಿಸುವ, ವಿರೋಧಿಸುವ ಮನೋಭಾವ ಹುಟ್ಟುತ್ತದೆ. ರಾಷ್ಟ್ರದ ಹಿತದೃಷ್ಟಿಯಿಂದ ಗಮನಿಸಿದಾಗ ಈ ಎಲ್ಲಾ ಬೆಳವಣಿಗೆಗಳು ಅಪಾಯಕಾರಿಯಾದದ್ದೇ. 3000 ವಿಭಿನ್ನ ಧರ್ಮ, ಭಾಷೆಗಳಿರುವ ಈ ದೇಶದಲ್ಲಿ ಸಾಮರಸ್ಯದಿಂದ, ಸಮನ್ವಯತೆಯಿಂದ ಬದುಕುವುದು ತುಸು ಕಷ್ಟ ಹೌದು. ಆದರೆ ಎಲ್ಲ ವಿಚಾರಗಳನ್ನು ಅವಲೋಕಿಸಿ ಒಳ್ಳೆಯದನ್ನು ಮಾತ್ರ ಆಯ್ದುಕೊಳ್ಳುವ ಪ್ರಜ್ಞೆ ನಮ್ಮಲ್ಲಿರಬೇಕು. ನಮ್ಮತನವನ್ನು ಗೌರವಿಸುವುದನ್ನು ಕಲಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಗೌಡ ಸ್ವಾಗತಿಸಿದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು. ವಿಚಾರ ಸಂಕಿರಣದಲ್ಲಿ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ ನಡೆಯಲಿದೆ.
ಜಪಾನ್ ದೇಶದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅನುಭವವನ್ನು ಡಾ. ಆಳ್ವ ಹಂಚಿಕೊಂಡರು. ಜಪಾನ್ ದೇಶದಲ್ಲಿ ಭಾರತದ ಅಗಾಧ ಸಂಸ್ಕೃತಿಯನ್ನು ಬಿಂಬಿಸಲು ಪ್ರಯತ್ನಿಸಿದ್ದನ್ನು ವಿವರಿಸಿದರು. ವಿದೇಶದಲ್ಲಿ ನೆಲೆಸುವ ಅವಕಾಶಗಳು ಸಾಕಷ್ಟು ಬಾರಿ ದಕ್ಕಿದ್ದರೂ ಅದನ್ನು ತಿರಸ್ಕರಿಸಿರುವುದಾಗಿ ತಿಳಿಸಿದ ಡಾ. ಆಳ್ವ, ‘ನನ್ನ ಆಲೋಚನೆಗಳು, ವಿಚಾರಗಳು ನನ್ನ ದೇಶದ ಪರಿಮಿತಿಯಲ್ಲೇ ಸಾಗಬೇಕು ಎಂಬುದು ನನ್ನ ಆಸೆ. ಹಾಗಾಗಿ ವಿದೇಶದತ್ತ ಮನಸ್ಸು ಕೊಟ್ಟಿಲ್ಲ’ ಎಂದರು.
ದಿನದ ಪ್ರಥಮ ಗೋಷ್ಠಿ "ಭಾಷಿಕ ಸಮುದಾಯ ಮತ್ತು ರಾಷ್ಟ್ರಪ್ರಜ್ಞೆ ’’ಯ ಕುರಿತು ಮಾತನಾಡಿದ ಹೈದ್ರಬಾದ್ ವಿಶ್ವವಿದ್ಯಾನಿಲಯದ , ಭಾಷಾಂತರ ಅಧ್ಯಯನ ವಿಭಾಗ, ಇಂಗ್ಲೀಷ್ ಮತ್ತು ವಿದೇಶಿ ಭಾಷೆಯ ಸಹಪ್ರಾಧ್ಯಾಪಕ ಡಾ ತಾರಕೇಶ್ವರ ವಿ ಬಿ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ವ್ಯವಸ್ಥಿತವಾಗಿ ಸಾಗಬೇಕೆಂದರೆ ಜನಗಳ ಆಡುಭಾಷೆಯಲ್ಲಿ ಆಡಳಿತ ನಡೆಯಬೇಕು, ಭಾಷೆಯ ಪ್ರಶ್ನೆಬಗೆಹರಿಸಿಕೊಳ್ಳದೇ ರಾಷ್ಟ್ರಪ್ರಜ್ಞೆಯ ಕಲ್ಪನೆ ಕಷ್ಟ ಸಾದ್ಯ ಎಂದರು. ಇಂದಿನ ಜಾಗತೀಕರಣದ ಭರಾಟೆಯಲ್ಲಿ, ಇಂಗ್ಲೀಷ್ ನಮ್ಮ ಸ್ವಂತ ಭಾಷೆಯಾಗಿ ಮರ್ಪಾಡುಗೊಂಡಿದೆ. ಭಾರತೀಯ ಭಾಷೆಯಲ್ಲಿ ಸಾಹಿತ್ಯ ರಚನೆಗೆ ಮುಂದಾದರೆ, ಪ್ರಾದೇಶಿಕ ಸಾಹಿತಿಗಳೆಂಬ ಹಣೆಪಟ್ಟಿ, ಅದೇ ಇಂಗ್ಲೀಷ್ ಭಾಷೆಯಲ್ಲಿ ಬರೆದರೆ, ರಾಷ್ಟ್ರೀಯ ಮನ್ನಣೆಯ ಗೌರವ ದೊರಕುವುದು ನಮ್ಮ ಭಾಷೆಗೆ ಬಂದೊದಗಿರುವ ಸ್ಥಿತಿಯ ಅನಾವರಣ ಎಂದು ನುಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯಜೀವನ್ ರಾಂ ಈ ಕಾರ್ಯಕ್ರಮವನ್ನು ನೆರೆವೇರಿಸಿಕೊಟ್ಟರು.
ದ್ವಿತೀಯ ಗೋಷ್ಠಿ ಯಲ್ಲಿ ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ ಬಿ ವಿ ವಸಂತಕುಮಾರ್ "ಸಮಾಜ ಮತ್ತು ರಾಷ್ಟ್ರಪ್ರಜ್ಞೆ’’ ಕುರಿತು ಮಾತನಾಡಿದರು. ಮನುಷ್ಯನಲ್ಲಿ ಪ್ರಜ್ಞೆ ಬೆಳೆಯದೇ ಹೋದರೆ, ಮನುಕುಲದ ಹಾಗೂ ವರ್ತಮಾನದ ಏಳಿಗೆ ಅಸಾಧ್ಯ, ರಾಷ್ಟ್ರಪ್ರಜ್ಞೆ ಒಬ್ಬ ವ್ಯಕ್ತಿಯಲ್ಲಿ ಸಂಸ್ಕೃತಿಪ್ರಜ್ಞೆಯನ್ನು ಬೆಳೆಸಿ ಸಮಾಜದ ಬದಲಾವಣೆಗೆ ದಾರದೀಪವಾಗಲೂ ಸಾದ್ಯ. ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರಪ್ರಜ್ಞೆಯನ್ನು ಮೂಡಿಸಿದ ಜ್ಯೋತಿಬಾಪುಲೆ, ರಾಮಕೃಷ್ಣಪರಮಹಂಸ, ವಿವೇಕಾನಂದ, ಮಹಾತ್ಮ ಗಾಂದೀಜಿಯವರ ಉದಾತ್ತ ಚಿಂತನೆಗಳು ನಮ್ಮ ಯುವಜನತೆಗೆ ಮಾದರಿ ಎಂದರು. ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ ಕೃಷ್ಣರಾಜ ಕರಬ ಕಾರ್ಯಕ್ರಮ ನಡೆಸಿ ಕೊಟ್ಟರು.