ಬಾವಿ ನೀರಿಗೆ ಹಾಲಿನ ಬಣ್ಣ !
ಪೆರಾವೂರ್,ಫೆ. 27: ಇಲ್ಲಿನ ಮಣತ್ತನದ ರವೀಂದ್ರನ್‌ರ ಮನೆಯ ಬಾವಿಯ ನೀರು ಹಾಲಿನ ಬಣ್ಣಕ್ಕೆ ತಿರುಗಿದೆ. ರವಿವಾರ ಮಧ್ಯಾಹ್ನ ನೀರಿನ ಬಣ್ಣದಲ್ಲಿ ಬಹುದೊಡ್ಡ ವ್ಯತ್ಯಾಸ ಗೋಚರಿಸಿದೆ. ನೀರಿಗೆ ಹಾಲಿನ ಬಣ್ಣ ಬಂದದ್ದರಿಂದ ಮನೆಯವರು ಬಾವಿಯ ಕೆಸರು ಇತ್ಯಾದಿ ತೆಗೆದಿದ್ದಾರೆ. ಸ್ವಲ್ಪಸಮಯದಲ್ಲಿ ಬಾವಿಯಲ್ಲಿ ಶೇಖರವಾದ ನೀರು ಕೂಡಾ ಹಾಲಿನ ಬಣ್ಣದ್ದಾಗಿತ್ತು. ಆನಂತರ ಆರೋಗ್ಯ ಇಲಾಖೆಗೆ ಸುದ್ದಿಮುಟ್ಟಿಸಲಾಯಿತು. ಆರೋಗ್ಯ ಇಲಾಖೆಯ ಅಧಿಕಾರಿಗಳು ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದು, ವರದಿ ಬರುವವರೆಗೆ ಈ ನೀರನ್ನು ಕುಡಿಯಬಾರದೆಂದು ಸೂಚಿಸಿದ್ದಾರೆ.
ಬಾವಿಯ ನೀರೊರತೆಯ ಬಳಿಯ ಆವೆ ಮಣ್ಣು ಇರುವುದು ನೀರು ಹಾಲಿನ ಬಣ್ಣಕ್ಕೆ ಬದಲಾಗಲು ಕಾರಣವೆಂದು ಹೈಡ್ರೊ ಜಿಯೊಲಜಿಸ್ಟ್ ಮತ್ತು ಜಲನಿಧಿ ಮಾಜಿ ರೀಜನಲ್ ಡೈರೆಕ್ಟರ್ ಇ.ವಿ. ಕೃಷ್ಣನ್ ಹೇಳಿದ್ದಾರೆ. ನೀರು ಬತ್ತುವ ಸಮಯ ಇದಾದ್ದರಿಂದ ಭೂಮಿಯ ನೀರು ಆವೆಮಣ್ಣಿನ ಸಮೀಪದ ಒರತೆಯೆಡೆಗೆ ಹರಿದು ಸಮೀಪದ ಬಾವಿಗಳಿಗೆ ಹರಿಯುತ್ತದೆ. ಕೆಲವೇ ಗಂಟೆಗಳಲ್ಲಿ ನೀರು ಪೂರ್ವ ಸ್ಥಿತಿ ಮರಳುವುದು ಎಂದು ಕೃಷ್ಣನ್ ತಿಳಿಸಿದ್ದಾರೆಂದು ವರದಿಯಾಗಿದೆ.