×
Ad

ಚುನಾವಣಾ ರ‍್ಯಾಲಿಯಲ್ಲಿ ಕ್ಯಾಮೆರಾ ಮ್ಯಾನ್ ಮೇಲೆ ಹರಿಹಾಯ್ದ ಪ್ರಧಾನಿ

Update: 2017-02-27 16:05 IST

ಲಕ್ನೌ, ಫೆ.27: ಉತ್ತರ ಪ್ರದೇಶದಲ್ಲಿ ಆರನೇ ಹಂತದ ವಿಧಾನಸಭಾ ಚುನಾವಣೆಯ ಪ್ರಚಾರಾರ್ಥ ಮವು ಎಂಬಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ಮಧ್ಯೆ ರ‍್ಯಾಲಿಯ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ ಮ್ಯಾನ್ ಒಬ್ಬರ ಮೇಲೆ ಸಿಟ್ಟುಗೊಂಡು ವೇದಿಕೆಯಿಂದಲೇ ಅವರನ್ನು ಗದರಿಸಿದ ಘಟನೆ ನಡೆದಿದೆ.

ಕ್ಯಾಮೆರಾವನ್ನು ಒಂದು ಕಡೆಯಿಂದ ತೆಗೆದು ಇನ್ನೊಂದು ಕಡೆ ಹಾಕುವಂತೆಯೂ ಪ್ರಧಾನಿ ಕ್ಯಾಮೆರಾಮೆನ್‌ಗೆ ಹೇಳಿದರು. ನಿಜ ಸಂಗತಿಯೇನೆಂದರೆ ಕ್ಯಾಮೆರಾ ಒಂದು ಕಡೆಗೆ ಸಾಗುತ್ತಿದ್ದಂತೆಯೇ ಅಲ್ಲಿ ಕುಳಿತಿದ್ದ ಜನರು ಜೋರಾಗಿ ಬೊಬ್ಬೆ ಹೊಡೆಯಲು ಆರಂಭಿಸುತ್ತಿದ್ದರು. ಇದು ಪ್ರಧಾನಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ರ‍್ಯಾಲಿಯಲ್ಲಿ ಸುಮಾರು ಅರ್ಧ ಗಂಟೆ ಮಾತನಾಡಿದ ನಂತರ ಸ್ವಲ್ಪ ಹೊತ್ತು ನೀರು ಕುಡಿದು ಸಾವರಿಸಿಕೊಂಡ ಪ್ರಧಾನಿ ನಂತರ ತಮ್ಮ ಭಾಷಣ ಮುಂದುವರಿಸುತ್ತಿದ್ದಂತೆಯೇ ಮೊದಲು ಕ್ಯಾಮೆರಾ ವಿಷಯವನ್ನು ಎತ್ತಿದ್ದರು. ‘‘ಭಾಯಿ, ನೀವು ಆ ಕಡೆಗೆ ಕ್ಯಾಮೆರಾ ಕೊಂಡೊಯ್ಯಬೇಡಿ. ಅವರೆಲ್ಲಾ ಕಾರಣವಿಲ್ಲದೆಯೇ ಕ್ಯಾಮೆರಾ ಅತ್ತ ಬರುತ್ತಿರುವಂತೆಯೇ ಗದ್ದಲ ಮಾಡುತ್ತಾರೆ. ಬೇರೆ ಯಾವುದಾದರೂ ಸ್ಥಳದಲ್ಲಿ ನಿಮ್ಮ ಕ್ಯಾಮರಾ ಇಡಿ,’’ ಎಂದು ಮೋದಿ ಕಟುವಾಗಿಯೇ ಹೇಳಿದರು. ಮೋದಿಯವರ ಮುಖದಲ್ಲಿ ಅಸಹನೆ ಮತ್ತು ಸಿಟ್ಟು ಸ್ಪಷ್ಟವಾಗಿ ಕಾಣುತ್ತಿತ್ತು. ಕ್ಯಾಮೆರಾ ಮ್ಯಾನ್ ಗೆ ಆದೇಶ ನೀಡಿದ ಬಳಿಕ ಮೋದಿ ತಮ್ಮ ಭಾಷಣವನ್ನು ಮತ್ತೆ ಮುಂದುವರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News