ಜೈಲಿನಿಂದ ಸ್ಪರ್ಧಿಸುವ ಹಕ್ಕು ಪ್ರಚಾರ ಮಾಡಲು ಹಕ್ಕು ಅಲ್ಲ:ಹೈಕೋರ್ಟ್
ಹೊಸದಿಲ್ಲಿ,ಫೆ.27: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಉತ್ತರ ಪ್ರದೇಶದ ಶಾಸಕ ಮುಖ್ತಾರ್ ಅನ್ಸಾರಿಗೆ ತನ್ನ ಪರ ಪ್ರಚಾರ ನಡೆಸಲು ಮಂಜೂರು ಮಾಡಲಾಗಿದ್ದ ಪೆರೋಲ್‌ನ್ನು ಸೋಮವಾರ ರದ್ದುಗೊಳಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು, ಜೈಲಿನಿಂದ ಚುನಾವಣೆಗಳಿಗೆ ಸ್ಪರ್ಧಿಸುವ ಹಕ್ಕು ಪ್ರಚಾರ ನಡೆಸಲು ಜೈಲಿನಿಂದ ಬಿಡುಗಡೆಗೊಳ್ಳುವ ಹಕ್ಕನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಅಭ್ಯರ್ಥಿಯು ಅಪರಾಧವೆಸಗಿದ ಆರೋಪದಲ್ಲಿ ಬಂಧನದಲ್ಲಿದ್ದರೆ ಪ್ರಕರಣದ ವಾಸ್ತವಾಂಶಗಳು ಮತ್ತು ಪರಿಸ್ಥಿತಿಯನ್ನು ಅವಲಂಬಿಸಿ ಆತನನ್ನು ಬಿಡುಗಡೆಗೊಳಿಸಬೇಕೇ ಬೇಡವೇ ಎನ್ನುವುದು ನ್ಯಾಯಾಲಯದ ವಿವೇಚನೆಗೆ ಸೇರಿರುತ್ತದೆ ಎಂದು ನ್ಯಾ.ಮುಕ್ತಾ ಗುಪ್ತಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅನ್ಸಾರಿಗೆ ಜಾಮೀನು ಮಂಜೂರು ಮಾಡುವ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ತಳ್ಳಿಹಾಕಿದ ನ್ಯಾ.ಗುಪ್ತಾ, ಬಂಧನದಲ್ಲಿರುವ ವ್ಯಕ್ತಿ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದಾಗ ಪ್ರಚಾರಕ್ಕಾಗಿ ತನ್ನನ್ನು ಬಿಡುಗಡೆಗೊಳಿಸಬೇಕೆಂಬ ಹಕ್ಕು ಆತನಿಗೆ ದೊರೆಯುವುದಿಲ್ಲ ಎಂದು ಹೇಳಿದರು.
ಉತ್ತರ ಪ್ರದೇಶದ ಮವು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇತ್ತೀಚಿಗೆ ಬಿಎಸ್‌ಪಿಗೆ ಸೇರ್ಪಡೆಗೊಂಡಿರುವ ಶಾಸಕ ಅನ್ಸಾರಿಗೆ ವಿಚಾರಣಾ ನ್ಯಾಯಾಲಯವು ಪ್ರಚಾರ ಕಾರ್ಯ ನಡೆಸಲು ಫೆ.16ರಿಂದ ಮಾ.4ರವರೆಗೆ ಪೆರೋಲ್ ಮಂಜೂರು ಮಾಡಿತ್ತು.