'ನಿಮ್ಮ ಸಿಎಂ' ಎಂದ ಜಿ.ಪಂ. ಅಧ್ಯಕ್ಷೆ!
ಮಂಗಳೂರು, ಆ.27: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಾತಿನ ಭರದಲ್ಲಿ 'ನಿಮ್ಮ ಸಿಎಂ' ಎಂದು ಹೇಳಿಕೆ ನೀಡುವ ಮೂಲಕ ವಿಪಕ್ಷ ಸದಸ್ಯರನ್ನು ಆಕ್ರೋಶಕ್ಕೀಡು ಮಾಡಿದ ಪ್ರಸಂಗ ಇಂದು ನಡೆಯಿತು.
ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳಿಗಾಗಿ ಕೇಂದ್ರ ಅನುದಾನಕ್ಕಾಗಿ ಸಂಸದರ ನೇತೃತ್ವದಲ್ಲಿ ತಂಡವೊಂದು ಭೇಟಿ ನೀಡೋಣ ಎಂದು ಮಾಜಿ ಅಧ್ಯಕ್ಷೆ ಹಾಗೂ ಹಿರಿಯ ಸದಸ್ಯೆ ಮಮತಾ ಗಟ್ಟಿಯವರು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯೆಗೆ ಮುಂದಾದ ಮೀನಾಕ್ಷಿ ಶಾಂತಿಗೋಡು, ಬೆಂಗಳೂರು ನಗರ ಹಾಗೂ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಅನುದಾನಕ್ಕಾಗಿ ನಿಯೋಗ ಕೊಂಡೊಯ್ದಿದ್ದರೂ ನಿಮ್ಮ ಸಿಎಂ ಏನೂ ಕೊಟ್ಟಿಲ್ಲ ಎಂದು ಹೇಳಿದರು.
ಈ ಮಾತು ವಿಪಕ್ಷ ಸದಸ್ಯರನ್ನು ಕೆರಳಿಸಿತು. ಅವರು ಎಲ್ಲರ ಸಿಎಂ. ಅಧ್ಯಕ್ಷ ಸ್ಥಾನದಲ್ಲಿದ್ದು, ನೀವು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಕ್ಷಮೆಯಾಚಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಯಾಗಿ ಅಧ್ಯಕ್ಷರು, 'ನೀವು ಅಷ್ಟು ಗುಡುಗಿದರೆ ಯಾರೂ ಹೆದರುವವರಿಲ್ಲ' ಎಂದು ಮಾತಿನ ತಿರುಗೇಟು ನೀಡಿದರು.
ಇದರಿಂದ ಮತ್ತೂ ಕೆರಳಿದ ವಿಪಕ್ಷ ಸದಸ್ಯರು , ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆಕ್ಷೇಪಿಸುತ್ತಾ, ಅಧ್ಯಕ್ಷರ ಪೀಠದೆದುರು ತೆರಳಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್‌ರವರು ಪ್ರತಿಭಟನಾನಿರತ ಸದಸ್ಯರ ಜತೆ ಸೇರಿಕೊಂಡರು.
ಕೊನೆಗೆ ಉಪಾಧ್ಯಕ್ಷೆ ಕಸ್ತೂರಿ ಪಂಜ ಪ್ರತಿಕ್ರಿಯಿಸಿ, ಕೆಲವೊಮ್ಮೆ ಶಬ್ಧಗಳಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ಸುಧಾರಿಸಿಕೊಂಡು ಹೋಗುವ ಎನ್ನುತ್ತಾ ಸದಸ್ಯರನ್ನು ಸಮಾಧಾನಿಸಲೆತ್ನಿಸಿದರು. ಕೆಲ ನಿಮಿಷಗಳ ಕಾಲ ಸದಸ್ಯರ ಪ್ರತಿಭಟನೆ ಮುಂದುವರಿದು, ಅವರು ನಮ್ಮ ಸಿಎಂ, ನಾನು ಹಾಗೇ ಹೇಳಿದ್ದು ಎಂದಾಗ ವಿಪಕ್ಷ ಸದಸ್ಯರು ತಮ್ಮ ಆಸನಗಳತ್ತ ತೆರಳಿ ಚರ್ಚೆ ಮುಂದುವರಿಸಲು ಅವಕಾಶ ನೀಡಿದರು.