ಕಿನ್ಯಾ ಗ್ರಾಮಸಭೆ: ಪಡಿತರ ಅವ್ಯವಸ್ಥೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಉಳ್ಳಾಲ, ಫೆ.27: ಕಿನ್ಯಾ ಗ್ರಾಮ ಪಂಚಾಯಿತಿಯ 2016-17 ನೇ ಸಾಲಿನ ಗ್ರಾಮ ಸಭೆಯು ಕಿನ್ಯಾ ರಹ್ಮತ್ ನಗರದ ಮದರಸದಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಪಡಿತರ ವ್ಯವಸ್ಥೆಯಲ್ಲಿ ಎದುರಾಗಿರುವ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ಗದ್ದಲವೆಬ್ಬಿಸಿದರು.
ಗ್ರಾಮದಲ್ಲಿರುವ ರೇಶನ್ ಅಂಗಡಿಗಳಿಗೆ ಮಹಿಳೆಯರೇ ಹೋಗುವುದು, ಕೂಪನ್‌ಗೆ ಅಲೆದಾಡಿ ರೇಶನ್ ಅಂಗಡಿಗೆ ಹೋಗುವಾಗ ಮುಚ್ಚಿರುತ್ತದೆ, ಇಲ್ಲವೇ ಅಕ್ಕಿ ಇರುವುದಿಲ್ಲ. ಕೆಲವೊಮ್ಮೆ ನಿಗದಿಪಡಿಸಿದಷ್ಟು ಅಕ್ಕಿಯೂ ನಮಗೆ ಸಿಕ್ತಾ ಇಲ್ಲ. ಹೀಗಾದರೆ ಕೂಪನ್ ವ್ಯವಸ್ಥೆ ಇರುವುದಾದರೂ ಯಾವುದಕ್ಕೆ ಎಂದು ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಯನ್ನು ಹಾಕಿದರು.
ಸಭೆಯಲ್ಲಿ ಗ್ರಾಮಸ್ಥರೊಬ್ಬರು ಮಾತನಾಡಿ, ತಿಂಗಳ ಒಂದನೇ ತಾರೀಕಿನಂದು ಬರಬೇಕಿದ್ದ ಅಕ್ಕಿ 20 ತಾರೀಕಿನ ನಂತರ ಬರುತ್ತಿದೆ. ಸರಕಾರದ ಆದೇಶದಂತೆ ಅಕ್ಕಿ ನೀಡುತ್ತಿಲ್ಲ. ಈ ವಿಷಯದಲ್ಲಿ ಉತ್ತರಿಸಬೇಕಿದ್ದ ಆಹಾರ ಇಲಾಖೆ ಅಧಿಕಾರಿಗಳು ಸಭೆಗೆ ಬಂದಿಲ್ಲ. ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿಗೆ ಗೊತ್ತಿದ್ದರೂ ನಿರ್ಲಕ್ಷ್ಯ ತಾಳಿದ್ದೇಕೆ ಎಂದು ಪ್ರಶ್ನಿಸಿದರು.
ಈ ಸಂದರ್ಭ ಪ್ರಶ್ನೆಗಳಿಗೆ ಉತ್ತರಿಸಿದ ಪಂಚಾಯಿತಿ ಉಪಾಧ್ಯಕ್ಷ ಸಿರಾಜ್, ಕಿನ್ಯ ಗ್ರಾಮದಲ್ಲಿ ಮೊದಲ ಬಾರಿಗೆ ಕೂಪನ್ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಆ ಸಂದರ್ಭ ಕೋಟೆಕಾರ್ ಮತ್ತು ತಲಪಾಡಿ ವ್ಯಾಪ್ತಿಗೆ ಸೇರಿದ್ದರಿಂದ ಅಲ್ಲಿಯ ಗ್ರಾಮಸ್ಥರಿಗೂ ಪಡಿತರ ಅಂಗಡಿಯವರು ಅಕ್ಕಿ ನೀಡಿದ್ದರಿಂದ ಕಿನ್ಯ ಗ್ರಾಮಸ್ಥರಿಗೆ ಸಿಗಬೇಕಿದ್ದ 90 ಕೆ.ಜಿ.ಅಕ್ಕಿ ಕೊರತೆಯಾಗಿದೆ. ಇದರಲ್ಲಿ ಪಡಿತರ ಅಂಗಡಿಯವರದ್ದೇ ಲೋಪವಾಗಿದೆ. ಇಲಾಖೆ ಅಥವಾ ಸರ್ಕಾರದ್ದು ತಪ್ಪಿಲ್ಲ. ಆಹಾರ ಇಲಾಖೆಯ ಉಪನಿರ್ದೇಶಕರು ಜಿ.ಪಂ. ಸಭೆಯಲ್ಲಿರುವುದರಿಂದ ಗ್ರಾಮಸಭೆಗೆ ಬಂದಿಲ್ಲ ಎಂದು ಹೇಳಿದರು.
ಉತ್ತರಿಂದ ಇನ್ನಷ್ಟು ಆಕ್ರೋಶಿತರಾದ ಗ್ರಾಮಸ್ಥರು ಪಡಿತರ ಅಂಗಡಿಯವರ ತಪ್ಪೆಂದಾದರೆ ಅವರ ವಿರುದ್ಧ ಪಂಚಾಯಿತಿ, ಇಲಾಖೆ ಕೈಗೊಂಡ ಕ್ರಮವೇನು? ಸರ್ಕಾರದಿಂದಲೇ ಅಕ್ಕಿ ಬಂದಿಲ್ಲ. ಆಹಾರ ಇಲಾಖೆಯಲ್ಲಿ ಒಬ್ಬರೇ ಅಧಿಕಾರಿ ಇರುವುದಲ್ಲ. ಉಪಾಧ್ಯಕ್ಷರ ಉತ್ತರ ಗ್ರಾ.ಪಂ. ಆಡಳಿತಗಾರರು, ಅಧಿಕಾರಿವರ್ಗದ ಬದ್ಧತೆ ತೋರಿಸುತ್ತದೆ ಎಂದು ಗ್ರಾಮಸ್ಥರು ಹರಿಹಾಯ್ದರು.
ಗ್ರಾಮಸ್ಥರಿಗೆ ಕೊರತೆಯಾಗಿರುವ ಅಕ್ಕಿ ಸರಿದೂಗಿಸುವಂತೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಇಲಾಖಾಧಿಕಾರಿಗೆ ನಿರ್ಣಯದ ಲಿಖಿತ ಪ್ರತಿ ಕಳುಹಿಸಲಾಗುವುದು ಎಂದು ಸಿರಾಜ್ ಭರವಸೆ ನೀಡಿದರು.
ಪ್ಲಾಸ್ಟಿಕ್ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ:
ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸುವುದು ಹಾಗೂ ಸ್ವಚ್ಛತೆ ಮುಖಾಂತರ ಸುಂದರ ಗ್ರಾಮ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಈ ಸಂಬಂಧ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಾರ್ಡ್ ಸಮಿತಿ ರಚಿಸಲಾಗುವುದು. ಗ್ರಾಮದ ಕೆಲವು ಕಡೆ ಕೋಳಿತ್ಯಾಜ್ಯ ಎಸೆಯುವ ಬಗ್ಗೆ ಮೌಖಿಕ ದೂರು ಬರುತ್ತಿದ್ದು, ಅದರ ಬದಲು ಲಿಖಿತ ದೂರು ನೀಡಿ. ಮನೆಗಳಲ್ಲಿ ಸ್ವಚ್ಛತೆ ಕಾಪಾಡಲು ಪೈಪ್ ಕಂಪೂಸ್ಟ್ ಬಳಸಿ. ಪ್ಲಾಸ್ಟಿಕ್ ನಿರ್ಮೂಲನೆಗೆ ಎಲ್ಲರೂ ಸಹಕರಿಸಬೇಕೆಂದು ಎಂದು ಪಿಡಿಓ ಪೂರ್ಣಿಮಾ ಮನವಿ ಮಾಡಿದರು.
ಅಕ್ಷರ ದಾಸೋಹ ಇಲಾಖಾಧಿಕಾರಿ ಗೀತಾ ಶಾನುಭಾಗ್ ನೋಡೆಲ್ ಅಧಿಕಾರಿಯಾಗಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳರಂಗೆ, ಗ್ರಾಮ ಕರಣಿಕ ಎನ್.ಜಿ.ಪ್ರಸಾದ್, ಆರೋಗ್ಯ ಇಲಾಖೆಯ ಮಂಜೇಗೌಡ, ಅಂಗನವಾಡಿ ಮೇಲ್ವಿಚಾರಕಿ ಶಾರದಾ, ಪಶು ಇಲಾಖೆಯ ಚಂದ್ರಹಾಸ, ಶಿಕ್ಷಣ ಇಲಾಖೆಯಿಂದ ವೀಣಾ ಡೇಸ, ಉಳ್ಳಾಲ ಎಸ್.ಐ. ರೇಣುಕಾ ಮೂರ್ತಿ, ಬಿಸಿಎಂ ಇಲಾಖೆಯ ಶ್ರೀಕಾಂತ್ ಮೊದಲಾದವ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.