ಎ.1ರಂದು ವಿದ್ಯುತ್ ದರ ಪರಿಷ್ಕೃರಣೆಗೊಳಿಸಿ ಆದೇಶ: ಎಂ.ಕೆ.ಶಂಕರಲಿಂಗೇಗೌಡ
ಮಂಗಳೂರು, ಫೆ.27: ವಿದ್ಯುತ್ ದರ ಪರಿಷ್ಕರಣೆಗೊಳಿಸಿ ಎಪ್ರಿಲ್ 1ರಂದು ಆದೇಶ ಹೊರಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಹೇಳಿದ್ದಾರೆ.
ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ)ಯು ಆಯೋಗಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಯೋಗವು ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಸಭೆಯಲ್ಲಿದ್ದ ರೈತ ಸಂಘಟನೆಗಳ ಮುಖಂಡರು, ಉದ್ದಿಮೆದಾರರು ಮತ್ತು ಸಾರ್ವಜನಿಕರು ವಿದ್ಯುತ್ ದರ ಏರಿಸದಂತೆ ಅಹವಾಲು ಮಂಡಿಸಿದರು. ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ, ವಿದ್ಯುತ್ ಬಳಕೆದಾರರ ಅಹವಾಲುಗಳನ್ನು ಆಲಿಸಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಪರಿಷ್ಕೃತ ದರವನ್ನು ಎ.1ರಂದು ಪ್ರಕಟಿಸಲಾಗುವುದು ಎಂದರು.
'ಎ' ಗ್ರೇಡ್ ಹೊಂದಿರುವ ಮೆಸ್ಕಾಂ ರ‍್ಯಾಂಕಿಂಗ್‌ನಲ್ಲಿ ದೇಶದಲ್ಲಿಯೇ 6ನೇ ಸ್ಥಾನದಲ್ಲಿದೆ. ಗುಜರಾತ್ 'ಎ ಪ್ಲಸ್' ಶ್ರೇಯಾಂಕ ಹೊಂದಿದೆ. ಮೆಸ್ಕಾಂನಿಂದ ಇನ್ನಷ್ಟು ಉತ್ತಮ ಕೆಲಸ ಆಗಬೇಕು ಎಂದು ಎಂ.ಕೆ.ಶಂಕರಲಿಂಗೇಗೌಡ, ಈಗಾಗಲೇ ಕೆಪಿಟಿಸಿಎಲ್, ಬೆಂಗಳೂರು, ಮೈಸೂರಿನಲ್ಲಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ. ಮುಂದೆ ಗುಲ್ಬರ್ಗ ಮತ್ತು ಹುಬ್ಬಳ್ಳಿಯಲ್ಲಿಯೂ ಸಭೆ ನಡೆಸಿ ಪರಿಷ್ಕರಣೆ ಮಾಡಲಾಗುವುದು ಎಂದರು.
ಯುನಿಟ್‌ಗೆ 1.48 ರೂ. ಹೆಚ್ಚಿಸಿ :
ವಿಷಯ ಪ್ರಸ್ತಾಪಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ, ವಿದ್ಯುತ್ ಖರೀದಿ ಪ್ರಮಾಣ ಹಾಗೂ ವಿದ್ಯುತ್ ಖರೀದಿ ವೆಚ್ಚದಲ್ಲಿನ ಏರಿಕೆಯಿಂದಾಗಿ ವಿದ್ಯುತ್ ದರ ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ. ಇದೀಗ ಮೆಸ್ಕಾಂ 700.45 ಕೋ.ರೂ.ಕೊರತೆ ಎದುರಿಸುತ್ತಿದೆ. ಇದನ್ನು ಸರಿದೂಗಿಸಲು ಆಯೋಗ ಪ್ರತಿ ಯುನಿಟ್ ವಿದ್ಯುತ್‌ಗೆ 1.48 ರೂ. ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಹಣದುಬ್ಬರ, ಹೊಸದಾಗಿ ಕಿರಿಯ ಲೈನ್‌ಮನ್‌ಗಳ ಹಾಗೂ ಇತರ ಸಿಬ್ಬಂದಿಯ ನೇಮಕಾತಿಯಿಂದಾಗಿ ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಿದೆ. ಬಡ್ಡಿ ಹಾಗೂ ಇತರೆ ಆರ್ಥಿಕ ವೆಚ್ಚದಲ್ಲೂ ಏರಿಕೆಯಾಗಿರುವುದರಿಂದ ಮೆಸ್ಕಾಂಗೆ ವಿದ್ಯುತ್ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ನುಡಿದರು.
ವಿದ್ಯುತ್ ಬಳಕೆದಾರರಿಂದ ತೀವ್ರ ಆಕ್ಷೇಪ:
ಈಗಾಗಲೆ ಚಾಲ್ತಿಯಲ್ಲಿರುವ ವಿದ್ಯುತ್ ದರ ಗ್ರಾಹಕರಿಗೆ ಹೊರೆಯಾಗಿದೆ. ಅಲ್ಲದೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ಹಾಗಾಗಿ ಈ ಬಾರಿ ಮತ್ತೆ ವಿದ್ಯುತ್ ದರ ಏರಿಕೆ ಮಾಡಬಾರದು ಎಂದು ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇತರ ಖಾಸಗಿ ಕಂಪೆನಿಗಳಿಂದ ಬರಬೇಕಾದ ಸಾವಿರಾರು ಕೋ.ರೂ.ವನ್ನು ವಸೂಲಿ ಮಾಡುವ ಕೆಲಸವನ್ನು ಮೆಸ್ಕಾಂ ಮೊದಲು ಮಾಡಬೇಕು. ಜೊತೆಗೆ ವಿದ್ಯುತ್ ಸೋರಿಕೆಯನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರಗಿಸಿದರೆ ನಷ್ಟದಿಂದ ಮುಕ್ತಿ ಪಡೆಯಬಹುದು ಎಂದು ಗ್ರಾಹಕರು ಅಭಿಪ್ರಾಯಪಟ್ಟರು.
ಮೆಸ್ಕಾಂ ಮತ್ತು ಗ್ರಾಹಕರ ಮಧ್ಯೆ ವಿದ್ಯುತ್ ಇಲಾಖೆ ಸಂವಹನ ಸಾಧಿಸಬೇಕು. ದರ ಏರಿಸಿದರೆ ರೈತರಿಗೆ ಇನ್ನಷ್ಟು ಹೊರೆಯಾಗಲಿದೆ. ಹಾಗಾಗಿ ವಿದ್ಯುತ್ ದರ ಏರಿಸಬಾರದು ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಘಟಕದ ಬಿ.ವಿ.ಪೂಜಾರಿ ಹೇಳಿದರು.
ತಮ್ಮ ಸಮಸ್ಯೆಗಳನ್ನು ಹೇಳಲು ದೂರು ಕೇಂದ್ರ ತೆರೆಯಬೇಕು. ವಿದ್ಯುತ್ ಉಳಿಸುವ ಬಗ್ಗೆ ಮೆಸ್ಕಾಂ ಕೈಪಿಡಿ ಹೊರ ತರಬೇಕು ಎಂದು ಶ್ರೀನಿವಾಸ ಭಟ್ ನುಡಿದರು.
ನೂತನ ಆ್ಯಪ್ ಮೂಲಕ ದೂರು ನೀಡಲು ವ್ಯವಸ್ಥೆ ಮಾಡಬಹುದಾಗಿದೆ. ಇದನ್ನು ಕಾರ್ಯಗತಗೊಳಿಸಿದರೆ ಗ್ರಾಹಕರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡಲು ಸಾಧ್ಯ ಎಂದು ಬಾಲ ಬಾಲಸುಬ್ರಹ್ಮಣ್ಯ ಭಟ್ ಸಲಹೆ ನೀಡಿದರು. ಸಮುದ್ರ ತೀರದ 5 ಕಿ.ಮೀ. ವ್ಯಾಪ್ತಿಯೊಳಗಿನ ಮಂಜುಗಡ್ಡೆ ಸ್ಥಾವರಗಳಿಗೆ ವಿದ್ಯುತ್ ದರ ಏರಿಕೆ ನಡೆಸಬಾರದು. ವಿದ್ಯುತ್ ಬಳಕೆ ಶೇ.50 ಇಳಿಸಬೇಕು ಎನ್ನುವ ಇಲಾಖೆಯ ಶರ್ತಗಳಿಗೆ ಬದ್ದರಾಗಿದ್ದೇವೆ ಎಂದು ರಾಜ್ಯ ಮಂಜುಗಡ್ಡೆ ಸ್ಥಾವರ ಮಾಲಕರ ಸಂಘದ ಅಧ್ಯಕ್ಷ ದೇವದಾಸ್ ಹೇಳಿದರು.
ಸರಕಾರದಿಂದ ವಿತರಿಸಲಾಗುವ ಎಲ್‌ಇಡಿ ಬಲ್ಬ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ನಿಷ್ಪ್ರಯೋಜಕವಾಗಿವೆ. ಇಲಾಖೆಯಿಂದಲೇ ಕಳಪೆ ಗುಣಮಟ್ಟದ ಬಲ್ಬ್‌ಗಳು ಪೂರೈಕೆಯಾಗದಂತೆ ತಡೆಹಿಡಿಯಬೇಕು ಎಂದು ನರಸಿಂಹ ನಾಯಕ್ ಮತ್ತು ಸತ್ಯನಾರಾಯಣ ಉಡುಪ ಒತ್ತಾಯಿಸಿದರು.
ಸರಕಾರದಿಂದ ನಿಯೋಜಿತವಾದ ಕಂಪೆನಿ ವಿತರಿಸಿದ ಎಲ್‌ಇಡಿ ಬಲ್ಬ್‌ಗಳು ಕಳಪೆಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಬದಲಿಸಲು ಮಂಗಳೂರು ಒನ್, ಬಿ.ಸಿ.ರೋಡು, ಶಿವಮೊಗ್ಗ ಹಾಗೂ ಮೂಡುಬಿದಿರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಹೇಳಿದರು.
ನಗರದ ವಿವಿಧ ಜಾಹೀರಾತು ಫಲಕಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹನುಮಂತ ಕಾಮತ್ ಆರೋಪಿಸಿದರು.
ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜೀವನ್ ಸಲ್ಡಾನ, ಎಸ್.ಎಸ್.ಕಾಮತ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಬಿ.ಎ.ನಝೀರ್, ನೈರುತ್ಯ ರೈಲ್ವೆಯ ಸಹಾಯಮಣಿ ರಾಜನ್, ತಾಂತ್ರಿಕ ತಜ್ಞ ಸತ್ಯನಾರಾಯಣ ಉಡುಪ, ವಿವಿಧ ಸಂಘಟನೆ ಮುಖಂಡರಾದ ಗೋವಿಂದರಾಜ್ ಭಟ್ ಕಾರ್ಕಳ, ಶಾಂತಪ್ಪ ಗೌಡ, ಅನಿಲ್ ಸಾವೂರು, ಪರಮೇಶ್ವರಪ್ಪ, ಶೋಭನ್‌ಬಾಬು, ಶ್ರೀನಿವಾಸ ಭಟ್, ವೆಂಕಟಗಿರಿ, ಈಶ್ವರರಾಜ್, ಜೆ.ವಿ.ಡೆಮೆಲ್ಲೊ, ಎ.ಜಿ.ಪೈ, ನರಸಿಂಹ ನಾಯಕ್, ರಾಮಕೃಷ್ಣ ಶರ್ಮಾ, ಸೂರ್ಯನಾರಾಯಣ, ಹೆನ್ರಿ ಬ್ರಿಟ್ಟೋ ಸಲಹೆ, ಸೂಚನೆ ನೀಡಿದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಎ.ಡಿ.ಅರುಣ್ ಕುಮಾರ್, ಡಿ.ಬಿ.ಮಣಿವಾಲ್ ರಾಜು ಉಪಸ್ಥಿತರಿದ್ದರು.
ಸೋಲಾರ್ ವಿದ್ಯುತ್ ಸಮರ್ಪಕ ಬಳಕೆ ಸವಾಲು:
2018ರ ಮೇ ವೇಳೆಗೆ ಸೋಲಾರ್ ವಿದ್ಯುತ್ ಘಟಕದಿಂದ 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದ್ದು, ಇದರ ಸಮರ್ಪಕ ಬಳಕೆ ಸವಾಲಾಗಿದೆ ಎಂದು ವಿದ್ಯುಚ್ಛಕ್ತಿ ಬೆಲೆ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಕರ ಲಿಂಗೇಗೌಡ ಅಭಿಪ್ರಾಯಪಟ್ಟರು.
ಗ್ರಾಹಕರಿಗೆ ಬೆಳಗ್ಗೆ 6 ರಿಂದ 8 ಗಂಟೆ ತನಕ ಹಾಗೂ ಸಂಜೆ 7 ರಿಂದ 10 ಗಂಟೆ ತನಕ ವಿದ್ಯುತ್ ಅಗತ್ಯ. ಆದರೆ ಈ ಅವಧಿಯಲ್ಲಿ ಸೋಲಾರ್ ಘಟಕದ ಪ್ರಯೋಜನ ಪಡೆಯುವುದು ಅಸಾಧ್ಯ. ಆದ್ದರಿಂದ ಸೂರ್ಯನ ಬೆಳಕು ಇರುವ ಸಂದರ್ಭದಲ್ಲಿ ಮಾತ್ರ ಉತ್ಪಾದನೆಯಾಗುವ ವಿದ್ಯುತನ್ನು ಸಮರ್ಪಕವಾಗಿ ಹೇಗೆ ಬಳಸಬೇಕು ಎನ್ನುವ ಕುರಿತು ಸಮರ್ಪಕ ಯೋಜನೆ ಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.