×
Ad

ಮಂಗಳೂರು: ದ.ಕ.ಜಿಲ್ಲೆ ನಗರೋತ್ಥಾನದ ಕ್ರಿಯಾ ಯೋಜನೆಗೆ ಅನುಮೋದನೆ

Update: 2017-02-27 19:06 IST

ಮಂಗಳೂರು, ಫೆ.27: ದ.ಕ.ಜಿಲ್ಲೆಯ 2 ನಗರಸಭೆ, 2 ಪುರಸಭೆ, 4 ಪಟ್ಟಣ ಪಂಚಾಯತ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಇತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 81 ಕೋ.ರೂ. ಅನುದಾನದ ಕ್ರಿಯಾಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ನಗರ ಸ್ಥಳೀಯ ಚುನಾಯಿತ ಸಂಸ್ಥೆಗಳ ನಗರೋತ್ಥಾನದ 3ನೆ ಹಂತದಲ್ಲಿ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ಮಂಜೂರಾದ ಈ ಅನುದಾನಕ್ಕೆ ಸಂಬಂಧಿಸಿ ಆಯಾ ಸಂಸ್ಥೆಗಳ ವ್ಯಾಪ್ತಿಯ ಶಾಸಕರ ಅನುಮೋದನೆಯೊಂದಿಗೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಅಂಗೀಕಾರ ಪಡೆಯಲಾಯಿತು.

ಜಿಲ್ಲೆಯಲ್ಲಿ ಉಳ್ಳಾಲ ಮತ್ತು ಪುತ್ತೂರು ನಗರ ಸಭೆ, ಬಂಟ್ವಾಳ ಮತ್ತು ಮೂಡುಬಿದಿರೆ ಪುರಸಭೆ, ಬೆಳ್ತಂಗಡಿ, ಮುಲ್ಕಿ, ಸುಳ್ಯ, ಕೋಟೆಕಾರ್, ವಿಟ್ಲ ಪಟ್ಟಣ ಪಂಚಾಯತ್‌ಗಳಿದ್ದು, ಆ ಪೈಕಿ ನಗರಸಭೆಗೆ ತಲಾ 25 ಕೋ.ರೂ., ಪುರಸಭೆಗೆ ತಲಾ 7.5 ಕೋ.ರೂ., ಹಳೆಯ 3 ಪಟ್ಟಣ ಪಂಚಾಯತ್‌ಗಳಿಗೆ ತಲಾ 2 ಕೋ.ರೂ. ಹೊಸ 2 ಪಟ್ಟಣ ಪಂಚಾಯತ್‌ಗಳಿಗೆ ತಲಾ 5 ಕೋ.ರೂ. ಅನುದಾನ ಹಂಚಿಕೆ ಮಾಡಲಾಗುತ್ತದೆ.

ಇದೀಗ ಜಿಲ್ಲೆಯ 9 ಚುನಾಯಿತ ಸಂಸ್ಥೆಗಳಿಗೆ ಮಂಜೂರಾದ 81 ಕೋ.ರೂ. ಪೈಕಿ ಶೇ.85ರಷ್ಟು ಹಣವನ್ನು ಕುಡಿಯುವ ನೀರು ಪೂರೈಕೆ ಮತ್ತು ಉಳಿದಂತೆ ಒಳಚರಂಡಿಗೆ ವ್ಯಯಿಸಲು ಸಭೆ ನಿರ್ಧರಿಸಿದೆ.

ಈ ಸಂದರ್ಭ ಮಾತನಾಡಿದ ಸಚಿವ ರಮಾನಾಥ ರೈ ಅಧಿಕಾರಿಗಳು ಸಕಾಲದಲ್ಲಿ ಕ್ರಿಯಾಯೋಜನೆಗೆ ಸಂಬಂಧಿಸಿ ರೂಪುರೇಷ ಸಿದ್ಧಪಡಿಸಿ ಕಾಲಮಿತಿಯೊಳಗೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿ. ಪ್ರಸನ್ನ, ವಿವಿಧ ಚುನಾಯಿತ ಸಂಸ್ಥೆಗಳ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News