ಪಶ್ಚಿಮ ಘಟ್ಟದ ಸಸ್ಯರಾಶಿ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ: ಡಾ.ಪುಲ್ಲಯ್ಯ

Update: 2017-02-27 13:54 GMT

ಉಡುಪಿ, ಫೆ.27: ಜಗತ್ತಿನ 34 ಅತಿ ಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಭಾರತದ ಪಶ್ಚಿಮಘಟ್ಟವೂ ಒಂದು. ಪಶ್ಚಿಮಘಟ್ಟಗಳಲ್ಲಿ ಗುರುತಿಸಲ್ಪಟ್ಟಿರುವ ಸುಮಾರು 5000ಕ್ಕೂ ಅಧಿಕ ಸಸ್ಯಪ್ರಬೇಧಗಳಲ್ಲಿ 2000 ಪ್ರಬೇಧಗಳು ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಂಡುಬರುವಂತದ್ದು. ಆದುದರಿಂದ ಇಲ್ಲಿನ ಸಸ್ಯರಾಶಿಗಳನ್ನು ಗುರುತಿಸಿ ಅದರ ಉಪಯುಕ್ತತೆ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದು ಆಂಧ್ರ ಪ್ರದೇಶದ ಅನಂತಪುರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ  ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಪುಲ್ಲಯ್ಯ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ 'ಪಶ್ಚಿಮಘಟ್ಟದ ಔಷಧಿ ಮತ್ತು ಪರಿಮಳಯುಕ್ತ ಸಸ್ಯಗಳು ಹಾಗೂ ಅವುಗಳ ಸಂರಕ್ಷಣೆ' ಕುರಿತ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿದೇಶಿ ಸಂಶೋಧಕರು ಭಾರತಕ್ಕೆ ಬಂದು ಪಶ್ಚಿಮಘಟ್ಟದಲ್ಲಿನ ವಿವಿಧ ಪ್ರಭೇದಗಳ ಕುರಿತು ಅಧ್ಯಯನ ನಡೆಸಿ ಪುಸ್ತಕಗಳನ್ನು ರಚಿಸಿ ಖ್ಯಾತರಾಗಿದ್ದಾರೆ. ಆದರೆ ನಾವು ಈ ರೀತಿಯ ಅತ್ಯಮೂಲ್ಯ ಪರಿಸರವನ್ನು ಹೊಂದಿದ್ದರೂ ಪ್ರಕೃತಿಯನ್ನು ಹುಡುಕಿಕೊಂಡು ವಿದೇಶಕ್ಕೆ ತೆರಳುತ್ತಿದ್ದೇವೆ. ಈ ಮೂಲಕ ನಮ್ಮ ಪಶ್ಚಿಮಘಟ್ಟವನ್ನು ನಿರ್ಲಕ್ಷಿಸುತ್ತಿದ್ದೇವೆ. ಇಲ್ಲಿನ ಸಾಕಷ್ಟು ಪ್ರಬೇಧಗಳು ಇಂದು ವಿನಾಶ ಹೊಂದಿವೆ ಅಥವಾ ವಿನಾಶದ ಅಂಚಿನಲ್ಲಿವೆ ಎಂದರು.

 ಸಂಶೋಧಕ ಟಿ.ಎಸ್.ಬಿಜು ಮಾತನಾಡಿ, ಪಶ್ಚಿಮಘಟ್ಟಗಳಲ್ಲಿನ ಕಪ್ಪೆಗಳ ಪ್ರಭೇಧದ ಕುರಿತು ಅಧ್ಯಯನ ನಡೆಸಿದಾಗ ಅವರಿಗೆ ಇಡೀ ಭಾರತದ ಒಟ್ಟು 400 ಕಪ್ಪೆ ಪ್ರಬೇಧಗಳಲ್ಲಿ 200 ಪ್ರಬೇಧವು ಪಶ್ಚಿಮಘಟ್ಟ ಒಂದರಲ್ಲೇ ಸಿಕ್ಕಿವೆ ಎಂದ ಅವರು, ಪಾಕಿಸ್ತಾನ, ಶ್ರೀಲಂಕಾ, ಮಲೇಷ್ಯಾ ದೇಶಗಳಲ್ಲಿನ ಸಸ್ಯ ಸಂಪತ್ತನ್ನು ಗುರುತಿಸುವ ಕಾರ್ಯ ನಡೆದರೂ ಭಾರತದಲ್ಲಿ ಆ ಕೆಲಸ ಇನ್ನು ಆಗಿಲ್ಲ. ವಿದ್ಯಾರ್ಥಿಗಳು ಮೊದಲು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿರುವ ಸಸ್ಯ ಪ್ರಬೇಧಗಳ ಕುರಿತು ಅಧ್ಯಯನ ಆರಂಭಿಸಬೇಕು ಎಂದು ಹೇಳಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಹರೀಶ್ ಭಟ್, ಪಿಪಿಸಿಯ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರೊ.ಡಾ.ಕೆ.ಗೋಪಾಲಕೃಷ್ಣ ಭಟ್, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿದ್ದರು.

ಮಂಗಳೂರು ವಿವಿ ಸಸ್ಯಶಾಸ್ತ್ರ ಉಪನ್ಯಾಸಕರ ಸಂಘ ಱವನಶ್ರೀೞಯ ಉಪಾ ಧ್ಯಕ್ಷೆ ಉಷಾರಾಣಿ, ಪಿಪಿಸಿಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ. ಭಟ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಜಗದೀಶ್ ಶೆಟ್ಟಿ ವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಲಕ್ಷ್ಮಿ ಭಟ್ ಸ್ವಾಗತಿಸಿದರು. ರಶ್ಮಿ ಬಿ.ಎಸ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News