ಶ್ರೇಷ್ಠ ಚಿತ್ರ ಪ್ರಶಸ್ತಿ ಘೋಷಣೆಯಲ್ಲಿ ಪ್ರಮಾದ !: ಹೀಗಾಗಿದ್ದು ಆಸ್ಕರ್ ಇತಿಹಾಸದಲ್ಲೇ ಪ್ರಥಮ
89ನೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ದೊಡ್ಡದೊಂದು ಎಡವಟ್ಟಿಗೆ ಕಾರಣವಾಯಿತು. ‘ಶ್ರೇಷ್ಠ ಚಿತ್ರ’ ಪ್ರಶಸ್ತಿಯನ್ನು ‘ಲಾ ಲಾ ಲ್ಯಾಂಡ್’ ಗೆದ್ದಿದೆ ಎಂಬುದಾಗಿ ಪ್ರಶಸ್ತಿ ವಿತರಕರಾದ ವಾರನ್ ಬಿಯಟಿ ಮತ್ತು ಫಾಯ್ ಡನವೆ ಘೋಷಿಸಿದರು.
ತಕ್ಷಣ ಚಿತ್ರದ ತಾರಾಗಣವು ವೇದಿಕೆಗೆ ಆಗಮಿಸಿತು ಹಾಗೂ ಪ್ರಶಸ್ತಿಗಾಗಿ ಚಿತ್ರದ ನಿರ್ಮಾಪಕರು ಧನ್ಯವಾದ ಸಲ್ಲಿಕೆಯನ್ನೂ ಆರಂಭಿಸಿದರು. ಇನ್ನಿತರ ವಿಧಿವಿಧಾನಗಳು ಆರಂಭಗೊಳ್ಳುವುದರಲ್ಲಿದ್ದವು.
ಆಗ ವೇದಿಕೆಯಲ್ಲಿ ದೊಡ್ಡದಾಗಿ ಗುಸು ಗುಸು ಕೇಳಿಬಂತು. ಕ್ಷಣಗಳ ಬಳಿಕ, ‘ಲಾ ಲಾ ಲ್ಯಾಂಡ್’ ನಿರ್ಮಾಪಕ ಜೋರ್ಡಾನ್ ಹೊರೊವಿಝ್ ಮೈಕ್ ಬಳಿ ಬಂದು ಘೋಷಿಸಿದರು: ‘‘ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ‘ಮೂನ್‌ಲೈಟ್’ ಗೆದ್ದಿದೆ’’. ಹಾಗೂ ‘‘ಇದು ತಮಾಷೆಯಲ್ಲ’’ ಎಂದರು.
ತಪ್ಪು ಲಕೋಟೆಯನ್ನು ನೀಡಲಾಗಿತ್ತೆ?
ಬಳಿಕ ಮೈಕ್ ಬಳಿ ಬಂದ ಪ್ರಶಸ್ತಿ ವಿತರಕ ಬಿಯಟಿ, ತನಗೆ ನೀಡಲಾದ ಲಕೋಟೆಯಲ್ಲಿ ‘ಎಮ್ಮಾ ಸ್ಟೋನ್, ಲಾ ಲಾ ಲ್ಯಾಂಡ್’ ಎಂಬುದಾಗಿ ಬರೆದಿತ್ತು ಎಂದರು. ಅದರಿಂದ ತನಗೆ ಗೊಂದಲವಾಯಿತು ಎಂದರು.ಅವರು ಲಕೋಟೆಯನ್ನು ಸಹ ನಿರೂಪಕಿ ಫಾಯ್ ಅವರಿಗೂ ತೋರಿಸಿದರು.
‘ಎಮ್ಮಾ ಸ್ಟೋನ್’ ಎಂಬ ಹೆಸರು ತಪ್ಪಾಗಿ ಮುದ್ರಿತವಾಗಿದೆ ಹಾಗೂ ‘ಲಾ ಲಾ ಲ್ಯಾಂಡ್’ ಸರಿಯಾದ ಹೆಸರು ಎಂದು ಭಾವಿಸಿ ತಾನು ಅದರ ಹೆಸರನ್ನು ಓದಿದೆ ಎಂದರು.
ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ನಿರೂಪಕ
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಥಮ ಬಾರಿಗೆ ನಿರೂಪಣೆ ಮಾಡಿದ ಅಮೆರಿಕದ ಖ್ಯಾತ ಟಿವಿ ನಿರೂಪಕ ಜಿಮ್ಮಿ ಕಿಮೆಲ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಪರೋಕ್ಷವಾಗಿ ಟೀಕಿಸಿದರು.
‘‘ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೋಟ್ಯಂತರ ಅಮೆರಿಕನ್ನರು ನೇರಪ್ರಸಾರದಲ್ಲಿ ನೋಡುತ್ತಿದ್ದಾರೆ. ಅದೇ ವೇಳೆ, ಈಗ ನಮ್ಮನ್ನು ದ್ವೇಷಿಸುತ್ತಿರುವ 225ಕ್ಕೂ ಅಧಿಕ ದೇಶಗಳ ಜನರೂ ಇದನ್ನು ನೋಡುತ್ತಿದ್ದಾರೆ. ಇದು ಅತ್ಯಂತ ಸಂಭ್ರಮದ ಸಂಗತಿಯಾಗಿದೆ’’ ಎಂದು ಅವರು ಹೇಳಿದರು.
ವಿಭಜಿತ ದೇಶವನ್ನು ಒಗ್ಗೂಡಿಸಲು ಏನು ಮಾಡಬೇಕು ಎಂಬುದನ್ನು ಹೇಳಲು ತನಗೆ ಪದಗಳು ಸಿಗುತ್ತಿಲ್ಲ ಎಂದರು.
‘‘ಈ ವಿಷಯದಲ್ಲಿ ನಾವೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಿಮಗೆ ಗೊತ್ತಿರುವ ನಿಮ್ಮ ರಾಜಕೀಯ ಎದುರಾಳಿಗಳನ್ನು ಸಂಪರ್ಕಿಸಿ ಅವರೊಂದಿಗೆ ಧನಾತ್ಮಕ ಹಾಗೂ ಉದಾರ ಸಂಭಾಷಣೆ ನಡೆಸಿ. ಆದರೆ, ಇಂಥ ಸಂಭಾಷಣೆಯನ್ನು ಲಿಬರಲ್‌ಗಳಾಗಿ ಅಥವಾ ಕನ್ಸರ್ವೇಟಿವ್‌ಗಳಾಗಿ ಮಾಡುವುದಿಲ್ಲ, ಅಮೆರಿಕನ್ನರಾಗಿ ಮಾಡಿ’’ ಎಂದು ಕಿಮೆಲ್ ಮನವಿ ಮಾಡಿದರು.
‘‘ನಮಗೆ ಇದನ್ನು ಮಾಡಲು ಸಾಧ್ಯವಾದರೆ, ನಾವು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಬಹುದಾಗಿದೆ’’ ಎಂದು ಟ್ರಂಪ್‌ರ ‘ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸೋಣ’ ಘೋಷಣೆಯನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಹೇಳಿದರು.