ತೆರಿಗೆ ಏರಿಕೆ: ಹೊಸಬೆಟ್ಟು ಗ್ರಾಪಂ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ
ಮೂಡಬಿದಿರೆ: ಹೊಸಬೆಟ್ಟು ಪಂಚಾಯತ್ ತೆರಿಗೆ ಏರಿಕೆ ನಡೆಸಲಾಗಿದೆ ಎಂದು ಆರೋಪಿಸಿ ಗ್ರಾ.ಪಂ. ಕಚೇರಿಗೆ ಹೊಸಬೆಟ್ಟು , ಪುಚ್ಚಮೊಗರು ಗ್ರಾಮಸ್ಥರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಾಜಿ ಸದಸ್ಯ ವಿಲ್ರೆಡ್ ಮೆಂಡೋನ್ಸಾ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೊಯ್ಲಸ್ ತಾಕೋಡೆ, ಗ್ರಾಮದ ಹಿರಿಯರಾದ ಲಿಯೋ ವಾಲ್ಟರ್ ನಜ್ರತ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಸ್ಥ ಶ್ಯಾಮ ಮಡಿವಾಳ, ಹೊಸಬೆಟ್ಟು ಹಾಗೂ ಇತರ ಪಂಚಾಯತ್‌ಗಳು ಹಾಗೂ ಮೂಡಬಿದಿರೆ ಪುರಸಭೆಯಲ್ಲಿರುವ ತೆರಿಗೆ ಕುರಿತು ಮಾಹಿತಿ ನೀಡಿದರು.
ಪ್ರತಿಭಟನಾಕಾರರನ್ನು ಸಮಾಧಾನಿಸಲು ಸ್ಥಳಕ್ಕೆ ಪಿಡಿಓ ಬಂದರೂ ಜನರಿಗೆ ಸಮಾಧಾನವಾಗಲಿಲ್ಲ. ಅಧ್ಯಕ್ಷರೇ ಬರಬೇಕೆಂದು ಜನರು ಪಟ್ಟು ಹಿಡಿದರು. ಕೊನೆಗೂ ಬಂದ ಅಧ್ಯಕ್ಷ ಮನೋಜ್ ಆಳ್ವಾರೀಸ್ ವಿಶೇಷ ಗ್ರಾಮಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದರು.
ಗ್ರಾಮಸಭೆ ನಡೆಯುವವರೆಗೆ ಯಾರೂ ತೆರಿಗೆ ಕಟ್ಟುವುದಿಲ್ಲ ಎಂದು ಗ್ರಾಮಸ್ಥರು ಘೋಷಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಜೊಸ್ಸಿ ಪಿರೇರಾ, ಗ್ರಾಮಸ್ಥ, ಭಾಸ್ಕರ ಆಚಾರ್ಯ, ಸಚೀಂದ್ರ ಎಸ್. ರೋನಾಲ್ಡ್ ಶೆರಾವೋ, ಸಿಐಟಿಯು ಮುಖಂಡ ಯಾದವ ಶೆಟ್ಟಿ ಸಹಿತ 200ಕ್ಕೂ ಅಕ ಗ್ರಾಮಸ್ಥರು ಉಪಸ್ಥಿತರಿದ್ದರು.