ಪುತ್ತೂರು: ಬೈಕ್ ಮತ್ತು ಪಿಕಪ್ ವಾಹನ ನಡುವೆ ಢಿಕ್ಕಿ; ಕ್ಯಾಂಪ್ಕೋ ಉದ್ಯೋಗಿ ಮೃತ್ಯು
ಪುತ್ತೂರು, ಫೆ.27: ಬೈಕ್ ಮತ್ತು ಪಿಕಪ್ ಜೀಪ್ ನಡುವೆ ಢಿಕ್ಕಿ ಸಂಭವಿಸಿ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮರೀಲು ಕಾಡುಮನೆ ಸಮೀಪ ಪುತ್ತೂರು ಕಾಣಿತಯೂರು ರಸ್ತೆಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಮೂಲತಃ ಸಕಲೇಶಪುರ ನಿವಾಸಿಯಾಗಿದ್ದು, ಪ್ರಸ್ತುತ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಸಮೀಪದ ಇಂದಿರಾನಗರ ಎಂಬಲ್ಲಿ ವಾಸ್ತವ್ಯವಿದ್ದ ರೇವಣ್ಣ (34) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ರೇವಣ್ಣ ಅವರು ನರಿಮೊಗ್ರು ಗ್ರಾಮದ ಇಂದಿರಾನಗರದಲ್ಲಿರುವ ತನ್ನ ಪತ್ನಿ ಮನೆಯಲ್ಲಿ ವಾಸ್ತವ್ಯವಿದ್ದುಕೊಂಡು ಪುತ್ತೂರಿನ ಕೂರ್ನಡ್ಕದಲ್ಲಿರುವ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರಾಗಿ ದುಡಿಯುತ್ತಿದ್ದರು. ಸೋಮವಾರ ಸಂಜೆ ರೇವಣ್ಣ ಅವರು ಎರಡನೇ ಪಾಳಯದ ಕೆಲಸಕ್ಕಾಗಿ ತನ್ನ ಬೈಕಿನಲ್ಲಿ ನರಿಮೊಗ್ರುವಿನ ಮನೆಯಿಂದ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ರೇವಣ್ಣ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ಪುತ್ತೂರು ಕಡೆಯಿಂದ ವೀರಮಂಗಲಕ್ಕೆ ತೆರಳುತ್ತಿದ್ದ ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರೇವಣ್ಣ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆಗೆ ಕಾರಣವಾದ ಪಿಕಪ್ ವಾಹನ ವೀರಮಂಗಲದ ಚಂದಪ್ಪ ಗೌಡ ಎಂಬವರಿಗೆ ಸೇರಿದ್ದಾಗಿದೆ.
ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.