ಪುತ್ತೂರು: ಟೆಂಪೋದಿಂದ ಬಿದ್ದು ಗಾರೆ ಕಾರ್ಮಿಕ ಮೃತ್ಯು
ಪುತ್ತೂರು, ಫೆ.27: ಟೆಂಪೋ ಲಾರಿಯಲ್ಲಿ ಇರಿಸಿದ್ದ ಗಾರೆ ಕೆಲಸದ ಉಪಕರಣವೊಂದರ ಮೇಲೆ ಕುಳಿತ್ತಿದ್ದ ಗಾರೆ ಕಾರ್ಮಿಕನೊಬ್ಬ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಆಂದ್ರಪ್ರದೇಶದ ಸಿ.ಎಸ್.ಪುರಂ ತಾಲ್ಲೂಕಿನ ಕೋನಪಳಿ ನಿವಾಸಿಯಾದ ಗಾರೆ ಕಾರ್ಮಿಕ ಮಾಸು (25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಕಾವು ಸಮೀಪದ ಮನೆಯೊಂದರಲ್ಲಿ ಗಾರೆ ಕೆಲಸ ಮುಗಿಸಿ ಇನ್ನೊಂದು ಮನೆಯಲ್ಲಿ ಕೆಲಸ ಮಾಡಲು ಕಾರ್ಮಿಕರು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಮನೆಯೊಂದರ ಗಾರೆ ಕೆಲಸ ಮುಗಿಸಿದ್ದ ಮೂವರು ಗಾರೆ ಕಾರ್ಮಿಕರು ಟೆಂಪೋ ಲಾರಿಯಲ್ಲಿ ಗಾರೆ ಕೆಲಸದ ಸಲಕರಣೆಗಳನ್ನು ಹೇರಿಕೊಂಡು ಮತ್ತೊಂದು ಮನೆಯ ಕೆಲಸಕ್ಕೆ ಹೊರಟಿದ್ದರು.ಕಾವು ಸಮೀಪಿಸಿದ ವೇಳೆ ಅಂಗಡಿಗೆ ಹೋಗಲಿದೆ ಎಂದು ಮಾಸು ಅವರು ತಿಳಿಸಿದ್ದ ಹಿನ್ನಲೆಯಲ್ಲಿ ಚಾಲಕ ಟೆಂಪೋವನ್ನು ನಿಲ್ಲಿಸಿದ್ದರು. ಗಾರೆ ಸಲಕರಣೆಗಳ ಮೇಲೆ ಕುಳಿತಿದ್ದ ಮಾಸು ಅವರು ಕೆಳಗೆ ಇಳಿಯುವ ವೇಳೆ ಆಕಸ್ಮಿಕವಾಗಿ ಆಯತಪ್ಪಿ ರಸ್ತೆಗೆ ಬಿದ್ದಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.
ಮೃತ ದೇಹವನ್ನು 108 ರಕ್ಷಾ ಕವಚ ಆ್ಯಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ತಂದು ಶವಾಗಾರದಲ್ಲಿ ಇರಿಸಲಾಗಿದ್ದು, ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.