ಅಮೆರಿಕದ ನೀತಿಗಳನ್ನು ಟೀಕಿಸಿ ಟ್ರಂಪ್‌ಗೆ ಅಹ್ಮದಿನಜಾದ್ ಪತ್ರ
ಟೆಹರಾನ್, ಫೆ. 27: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ಬರೆದ ಪತ್ರವೊಂದರಲ್ಲಿ, ಇರಾನ್‌ನ ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿನಜಾದ್ ಅಮೆರಿಕದ ನೀತಿಗಳನ್ನು ಖಂಡಿಸಿದ್ದಾರೆ.
ಮುಸ್ಲಿಮ್ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿಷೇಧ ಮತ್ತು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರಾಬಲ್ಯವನ್ನು ಟೀಕಿಸಿದ ಅವರು, ಅಮೆರಿಕ ಅಭದ್ರತೆ, ಯುದ್ಧ, ವಿಭಜನೆ, ಹತ್ಯೆ ಮತ್ತು ದೇಶಗಳ ಅಸ್ಥಿರತೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
3,500 ಪದಗಳುಳ್ಳ ಪತ್ರವನ್ನು ಇರಾನ್‌ನ ಮಾಜಿ ಅಧ್ಯಕ್ಷರು ಟೆಹರಾನ್‌ನಲ್ಲಿರುವ ಸ್ವಿಟ್ಸರ್‌ಲ್ಯಾಂಡ್ ರಾಯಭಾರ ಕಚೇರಿಗೆ ತಲುಪಿಸಿದರು.
ಇರಾನ್ ಸೇರಿದಂತೆ ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರ ಅಮೆರಿಕ ಪ್ರವೇಶಕ್ಕೆ ಅಮೆರಿಕ ನಿಷೇಧ ವಿಧಿಸಿರುವುದನ್ನು ಅಹ್ಮದಿನಜಾದ್ ತನ್ನ ಪತ್ರದಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.
ಟ್ರಂಪ್ ಅವರ ಈ ನಿಷೇಧ ಆದೇಶಕ್ಕೆ ನ್ಯಾಯಾಲಯವೊಂದು ಬಳಿಕ ತಡೆಯಾಜ್ಞೆ ವಿಧಿಸಿತು ಹಾಗೂ ಮೇಲ್ಮನವಿ ನ್ಯಾಯಾಲಯವೊಂದು ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿತು.
ಇರಾನ್ ಮೂಲದ ಸುಮಾರು 10 ಲಕ್ಷ ಜನರು ಅಮೆರಿಕದಲ್ಲಿದ್ದಾರೆ ಎಂದು ಹೇಳಿದ ಅವರು, ದೇಶಗಳು ಮತ್ತು ಜನಾಂಗಗಳ ವೈವಿಧ್ಯತೆಯನ್ನು ಅಮೆರಿಕ ಗೌರವಿಸಬೇಕು ಎಂದರು.
‘‘ವಿವಿಧ ದೇಶಗಳ ಜನರು ವಲಸೆ ಹೋಗಿಯೇ ಅಮೆರಿಕ ರೂಪುಗೊಂಡಿದೆ ಹಾಗೂ ಅಲ್ಲಿ ಅಭಿವೃದ್ಧಿಯಾಗಿದೆ’’ ಎಂದು ಅಹ್ಮದಿನಜಾದ್ ಪತ್ರದಲ್ಲಿ ಬರೆದಿದ್ದಾರೆ.
‘‘ಇರಾನ್ ಸೇರಿದಂತೆ ವಿವಿಧ ದೇಶಗಳ ಪ್ರತಿಭಾವಂತರು ಮತ್ತು ವಿಜ್ಞಾನಿಗಳ ಉಪಸ್ಥಿತಿ ಮತ್ತು ರಚನಾತ್ಮಕ ಕೆಲಸ ಅಮೆರಿಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ’’ ಎಂದಿದ್ದಾರೆ.
‘‘ನಾಲ್ಕು ವರ್ಷಗಳು ಸುದೀಘ ಅವಧಿಯೇ ಆಗಿದೆ, ಆದರೆ, ಅದು ಶೀಘ್ರವಾಗಿ ಮುಗಿಯುತ್ತದೆ’’ ಎಂದು ಅವರು ಎಚ್ಚರಿಸಿದ್ದಾರೆ.
ಅಹ್ಮದಿನಜಾದ್ 2005ರಿಂದ 2013ರವರೆಗೆ ಇರಾನ್‌ನ ಅಧ್ಯಕ್ಷರಾಗಿದ್ದರು.