ಮಂಗಳೂರು: ಕೊರಗ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಉದ್ಘಾಟನೆ
ಮಂಗಳೂರು, ಫೆ. 27: ಸ್ವಚ್ಛ ಭಾರತದ ಘೋಷಣೆಯನ್ನು ಪ್ರಧಾನ ಮಂತ್ರಿಯವರು ಮಾಡಿದಾಗ ಅವರು ದೇಶವನ್ನು ಕೋಮುವಾದ, ಭ್ರಷ್ಟಾಚಾರ ಹಾಗೂ ಆತಂಕವಾದಗಳಿಂದ ದೂರ ಮಾಡುವರೆಂದು ಭಾವಿಸಿ ನಾವು ಸ್ವಾಗತಿಸಿದ್ದೆವು. ಆದರೆ ಅವೆಲ್ಲವೂ ಕೇವಲ ರಸ್ತೆ ಗುಡಿಸುವುದಷ್ಟಕ್ಕೇ ಸೀಮಿತವಾಗಿ ನಮಗೆ ಭ್ರಮನಿರಸನವುಂಟಾಗಿದೆ. ಇವತ್ತು ಕೋಮುವಾದವನ್ನು ನಿಜವಾಗಿಯೂ ಎದುರಿಸಿ ಸೌಹಾರ್ದ ರ‍್ಯಾಲಿ ಮಾಡಿದುದಕ್ಕೆ ಸಿಪಿಎಂ ಪಕ್ಷವನ್ನು ಅಭಿನಂದಿಸಬೇಕಾಗಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಹೇಳಿದ್ದಾರೆ.
ಅವರು ನಗರದ ಕುಲಶೇಖರ ಕೋಟಿಮುರದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಕೊರಗ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತನಾಡುತ್ತಿದ್ದರು.
2009ರಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಂತೂರಿನಲ್ಲಿ ವಾಸವಾಗಿದ್ದ 8 ಕೊರಗ ಕುಟುಂಬಗಳನ್ನು ಹೆದ್ದಾರಿ ವಿಸ್ತರಣೆಗಾಗಿ ಒಕ್ಕಲೆಬ್ಬಿಸಿ ನಿರ್ವಸಿತಗೊಳಿಸಿದ ವಿದ್ಯಮಾನವನ್ನು ಸಿಪಿಎಂ ಮಂಗಳೂರು ನಗರ ಸಮಿತಿ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹೋರಾಟಗಳನ್ನು ಮಾಡಿ ಆದಿವಾಸಿಗಳಿಗೆ ನಗರ ಪಾಲಿಕೆ ವತಿಯಿಂದ ನಿವೇಶನ ಹಾಗೂ ವಸತಿ ಮಂಜೂರು ಮಾಡಿಸಲು ಶ್ರಮಿಸಿರುವುದು ಶ್ಲಾಘನೀಯ ಎಂದರು.
ಕಾಂಗಾರಿಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿರುವ ತಿಮ್ಮಯ್ಯ ಕೊಂಚಾಡಿ, ಪ್ರೇಮನಾಥ ಜಲ್ಲಿಗುಡ್ಡೆ, ಉಮಾಶಂಕರ ಬೋಳೂರು ಮತ್ತು ಕಿಶೋರ್ ಪೊರ್ಕೋಡಿ ಇವರಿಗೆ ರಾಯ್ ಕ್ಯಾಸ್ಟಲಿನೊ ಅವರು ಕಾಮಗಾರಿ ಸಲಕರಣೆಗಳನ್ನು ಹಸ್ತಾತರಿಸುವ ಮೂಲಕ ಕಾಮಗಾರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಮುಖಂಡ ಎಸ್. ವೈ. ಗುರುಶಾಂತ್ ಮಾತನಾಡಿ, ಕೊರಗರು ಸೇರಿ ಆದಿವಾಸಿಗಳ ಬದುಕು ಉಳಿದಲ್ಲಿ ಮಾತ್ರ ದೇಶದ ಜನಸಮುದಾಯದ ಬದುಕು ಉಳಿಯಬಲ್ಲುದು ಎಂದು ಎಚ್ಚರಿಸಿದರು.
ಕೃಷ್ಣಪ್ಪ ಕೊಂಚಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ, ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಲಿಂಗಪ್ಪ ನಂತೂರು ಮಾತನಾಡಿದರು.
ವೇದಿಕೆಯಲ್ಲಿ ಸೀತಾರಾಮ್ ಎಸ್. ಕೋಡಿಕಲ್, ಆದಿವಾಸಿ ಹಕ್ಕುಗಳ ಸಮಿತಿ ನಗರ ಅಧ್ಯಕ್ಷ ಶಾಂತಾ ನಾಯ್ಕಾ, ಕಾರ್ಯದರ್ಶಿ ಶಶಿಕಲಾ ನಂತೂರು ಉಪಸ್ಥಿತರಿದ್ದರು.
ಜಯಕುಮಾರ್ ಸ್ವಾಗತಿಸಿ, ಸಂತೋಷ್ ಶಕ್ತಿನಗರ ವಂದಿಸಿದರು.