ಬೆಳ್ತಂಗಡಿ: ಶಾಲಾ ಬಾಲಕನಿಗೆ ಮದ್ಯ ಕುಡಿಸಿದ ಪ್ರಕರಣ; ಆರೋಪಿ ಬಂಧನ
ಬೆಳ್ತಂಗಡಿ, ಫೆ.27: ಕಳೆಂಜದಲ್ಲಿ ಐದನೆಯ ತರಗತಿಯ ಶಾಲಾ ಬಾಲಕನಿಗೆ ಕಳ್ಳಬಟ್ಟಿ ಮದ್ಯ ಕುಡಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸ್ಥಳೀಯ ನಿವಾಸಿ ಅಕ್ರಮ ಸರಾಯಿ ಮಾರಾಟಗಾರನಾಗಿರುವ ಮೋಹನ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ವಾರದ ಹಿಂದೆ ಕಳೆಂಜದಲ್ಲಿ ಅಕ್ರಮ ಮದ್ಯ ಮಾರಾಟಗಾರರ ತಂಡ ಶಾಲಾ ಬಾಲಕನಿಗೆ ಮದ್ಯ ಕುಡಿಸಿದ್ದರು. ಮದ್ಯ ಸೇವಿಸಿದ ಬಾಲಕ ರಸ್ತೆ ಬದಿಯಲ್ಲಿ ಬಿದ್ದಿದ್ದು ಆತನನ್ನು ಬಳಿಕ ಮಂಗಳೂರಿನ ಸರಕಾರಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಈ ಬಗ್ಗೆ ಬಾಲಕನ ತಂದೆ ಅಣ್ಣು ಈ ಬಗ್ಗೆ ಧರ್ಮಸ್ಥಳ ಪೋಲೀಸರಿಗೆ ದೂರು ನೀಡಿದ್ದರೂ, ಪ್ರಕರಣ ದಾಖಲಿಸದಿರುವ ಬಗ್ಗೆ ರವಿವಾರ ನಡೆದ ಪರಿಶಿಷ್ಟ ಜಾತಿ ಪಂಗಡದ ಸಭೆಯಲ್ಲಿ ದಲಿತ ಮುಖಂಡರುಗಳು ಪ್ರಸ್ತಾಪಿಸಿದ್ದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರ ಸೂಚನೆಯಂತೆ ಈ ಬಗ್ಗೆ ಪರಿಶೀಲನೆಗಾಗಿ ಸೋಮವಾರ ಬಂಟ್ವಾಳ ಡಿವೈಎಸ್ಪಿ ರವೀಶ್ ಅವರು ಧರ್ಮಸ್ಥಳ ಠಾಣೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಪ್ರಕರಣದ ಪ್ರಮುಖ ಆರೋಪಿ ಮೋಹನನ್ನು ಬಂಧಿಸಿದ್ದಾರೆ. ಪ್ರಕರಣದ ಇತರೆ ಆರೋಪಿಗಳಾದ ವಿಶ್ವನಾಧ ಹಾಗೂ ಕೊರಗಪ್ಪ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.