ಮಂಗಳೂರು: 'ಗ್ರೀನ್ ಬ್ಯಾಂಕಿಂಗ್ ಗ್ರಹಿಕೆ ಮತ್ತು ಸವಾಲುಗಳು' ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು, ಫೆ.27: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯಶಾಸ್ತ್ರ ಭಾಗವು 'ಗ್ರೀನ್ ಬ್ಯಾಂಕಿಂಗ್ ಗ್ರಹಿಕೆ ಮತ್ತು ಸವಾಲುಗಳು' ಎಂಬ ವಿಷಯದಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಲ್ಲಿನ ಡಿಜಿಎಂ ಗಿರಿಧರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಂಗಳೂರು ಉಪಕುಲಪತಿ ಪ್ರೊ. ಕೆ.ಭೈರಪ್ಪ ವಹಿಸಿದ್ದರು.
ಆಸ್ಟ್ರೇಲಿಯಾದ ತಂತ್ರಜ್ಞಾನದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಆಗಿರುವ ಜಿಮ್ ಹಾಗನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾನೂನು ಹಾಗೂ ಚೇತರಿಕೆ ಸೆಲ್ ಕರ್ನಾಟಕ ಬ್ಯಾಂಕ್ ಇದರ ಜಿ.ಎಂ. ಡಾ. ಮೀರಾ ಲಿಟಿಫಿಯಾ ಅರ್ಹನ ಮಾತನಾಡಿದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ, ಪ್ರಾಧ್ಯಾಪಕ ಡಾ. ಸಿ.ಕೆ ಹೆಬ್ಬಾರ್ ಸಮ್ಮೇಳನದ ಕುರಿತು ಪಕ್ಷಿನೋಟ ನೀಡಿದರು.
ಸಮ್ಮೇಳನದಲ್ಲಿ ಆಯ್ದ 89 ಸಾಂಶೋಧನಾ ಲೇಖನಗಳನ್ನು ಐಎಸ್‌ಬಿಎನ್ ಸಂಂಖ್ಯೆಯೊಂದಿಗೆ ಎಕ್ಸೆಲ್ ಪಬ್ಲಿಕೇಶನ್ಸ್‌ನವರಿಂದ ಮುದ್ರಿತಗೊಂಡಿದ್ದು, ಈ ಪುಸ್ತಕವನ್ನು ಪ್ರೊ. ಕೆ. ಭೈರಪ್ಪನವರು ಬಿಡುಗಡೆಗೊಳಿಸಿದರು. ಡಾ. ಯತೀಶ್ ಕುಮಾರ್ ವಂದಿಸಿದರು. ಡಾ. ವೊಲ್ಲಿ ಸಂಜಯ್ ಚೌಧರಿ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನವನ್ನು ಮೂರು ಮುಖ್ಯ ಅಧಿವೇಶನಗಳಾಗಿ ವಿಭಾಗಿಸಿದ್ದು, ಗ್ರೀನ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಬ್ಯಾಂಕಿಂಗ್ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾಯರ್ರ್ಕ್ರಮ ಜರುಗಿತು. ಇದಲ್ಲದೇ, ಓಮನ್ ಹಾಗೂ ಮಲೇಶಿಯಾದ ಬ್ಯಾಂಕ್‌ಗಳು ಇದರಲ್ಲಿ ಭಾಗವಹಿಸಿದ್ದವು.
ವಿಚಾರ ಸಂಕೀರ್ಣವು ಗ್ರೀನ್ ಬ್ಯಾಂಕಿಂಗ್ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಬ್ಯಾಂಕಿಂಗ್ ತಜ್ಞರಿಗೆ, ಶೈಕ್ಷಣಿಕ ಕ್ಷೇತ್ರದ ತಜ್ಞರಿಗೆ, ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೇದಿಕೆಯಾಗಿತ್ತು. ದೇಶ-ವಿದೇಶಗಳ ಪ್ರತಿಷ್ಠಿತ ವಾಣಿಜ್ಯ ಬ್ಯಾಂಕುಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ಸುಮಾರು 600 ಪ್ರತಿನಿಧಿಗಳು ಭಾಗವಹಿಸಿದ್ದು, ಗ್ರೀನ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬ್ಯಾಂಕಿಂಗ್ ವಲಯದವರು ಪ್ರಸ್ತುತಪಡಿಸಿದ 250ಕ್ಕೂ ಮಿಕ್ಕಿದ ಸಂಶೋಧನಾ ಲೇಖನಗಳು ಮಂಡಿಸಲ್ಪಟ್ಟವು.
ಸಮಾರೋಪ ಸಮಾರಂಭವು ಪ್ರಾಂಶುಪಾಲ ಡಾ.ಉದಯಕುಮಾರ್, ಅಧ್ಯಕ್ಷತೆಯಲ್ಲಿ ನೆರವೇರಿತು.
ಯೆನಪೋಯ ವಿವಿಯ ನಿವೃತ್ತ ಐ.ಆರ್.ಎಸ್. ಕುಲಸಚಿವ ಡಾ. ಈ. ಶ್ರೀಕುಮಾರ್ ಮೆನನ್, ಕಾರ್ಪೋರೇಷನ್ ಬ್ಯಾಂಕ್‌ನ ವಲಯ ಮುಖ್ಯ ಅಧಿಕಾರಿ ಹಾಗೂ ಡಿಜಿಎಂ ಎ.ಕೆ. ವಿನೋದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಎ. ಸಿದ್ದಿಕ್ ಸ್ವಾಗತಿಸಿದರು.