×
Ad

ವಿಜಯಾ ಬ್ಯಾಂಕ್ ದೇಶದ ಆರೋಗ್ಯಕರ ಬ್ಯಾಂಕ್‌ಗಳಲ್ಲಿ ಒಂದು: ಕಾರ್ಯನಿರ್ವಾಹಕ ನಿರ್ದೇಶಕ ರಾಮರಾವ್

Update: 2017-02-27 22:23 IST

ಉಡುಪಿ, ಫೆ.27: ರಾಷ್ಟ್ರೀಕೃತ ವಿಜಯಾ ಬ್ಯಾಂಕ್, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಆರೋಗ್ಯಕರ ಸ್ಥಿತಿಯಲ್ಲಿ ಇರುವ ದೇಶದ ಮೂರು ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾಗಿದೆ ಎಂದು ವಿಜಯಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಸ್.ರಾಮರಾವ್ ಹೇಳಿದ್ದಾರೆ.

ಉಡುಪಿಯ ಕವಿ ಮುದ್ದಣ ಮಾರ್ಗದಲ್ಲಿರುವ ಶ್ರೀಸಾಯಿ ಪ್ಯಾಲೇಸ್‌ನ ವಿಶಾಲ ಕಟ್ಟಡಕ್ಕೆ ಸ್ಥಳಾಂತರಗೊಂಡ ಉಡುಪಿಯ ಪ್ರಧಾನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 1931ರಲ್ಲಿ ಸ್ಥಾಪನೆಗೊಂಡ ವಿಜಯಾಬ್ಯಾಂಕಿನ ಎರಡನೇ ಶಾಖೆ ಉಡುಪಿಯಲ್ಲಿ ಪ್ರಾರಂಭಗೊಂಡಿದ್ದು, ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಶಾಖೆಯನ್ನು ಸ್ಥಳಾಂತರಿಸಲಾಗಿದೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರನ್ನು ಪ್ರಧಾನ ಗುರಿಯಾಗಿಸಿ ಕೊಂಡು ಪ್ರಾರಂಭಗೊಂಡ ವಿಜಯಾ ಬ್ಯಾಂಕ್, ಇಂದು ದೇಶಾದ್ಯಂತ 2030 ಶಾಖೆಗಳನ್ನು ಹೊಂದಿದೆ. 2.20ಲಕ್ಷ ಕೋಟಿ ರೂ.ಒಟ್ಟು ವ್ಯವಹಾರವನ್ನು ಹೊಂದಿರುವ ಈ ಬ್ಯಾಂಕ್ 1.50 ಕೋಟಿ ಗ್ರಾಹಕರನ್ನು ಪಡೆದಿದೆ. 16,000 ನೌಕರರು ಇದರಲ್ಲಿ ಸೇವೆ ಸಲ್ಲಿಸುತಿದ್ದಾರೆ ಎಂದರು.

ಈ ಸಾಲಿನಲ್ಲಿ ಬ್ಯಾಂಕ್ 235 ಕೋಟಿ ರೂ.ಲಾಭವನ್ನು ದಾಖಲಿಸಿದೆ. ದೇಶದ ಸಾರ್ವಜನಿಕರ ರಂಗದ ಆರೋಗ್ಯಕರ ಬ್ಯಾಂಕುಗಳಲ್ಲಿ ನಮಗೆ ಅಗ್ರ ಮೂರರಲ್ಲಿ ಸ್ಥಾನವಿದೆ. ಸಾರ್ವಜನಿಕರ ವಲಯದ ಬ್ಯಾಂಕ್‌ಗಳಲ್ಲಿ ನಮ್ಮ ಬ್ಯಾಂಕಿನ ಅನುತ್ಪಾದಕ ಆಸ್ತಿ ಅತ್ಯಂತ ಕಡಿಮೆಯದಾಗಿದೆ. ಉಳಿದ ಬ್ಯಾಂಕುಗಳಲ್ಲಿ ಸರಾಸರಿ ಎನ್‌ಪಿಎ ಶೇ.6.95 ಆಗಿದ್ದರೆ, ವಿಜಯ ಬ್ಯಾಂಕಿನದ್ದು ಕೇವಲ 4.75 ಆಗಿದೆ ಎಂದು ವಿವರಿಸಿದರು.

ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಉಡುಪಿ ವಲಯದಲ್ಲಿ ಬ್ಯಾಂಕ್ 69 ಶಾಖೆಗಳನ್ನು ಹೊಂದಿದ್ದು, 4,700 ಕೋಟಿ ರೂ.ವ್ಯವಹಾರಗಳನ್ನು ನಡೆಸುತ್ತಿದೆ. ಶೀಘ್ರದಲ್ಲೇ ಇನ್ನೆರಡು ಶಾಖೆಗಳನ್ನು ತೆರೆಯಲಾಗುವುದು ಎಂದರು.

ಇನ್ನೆರಡು ವರ್ಷಗಳೊಳಗೆ ವಿಜಯ ಬ್ಯಾಂಕ್‌ನ್ನು ದೇಶದ ಅತ್ಯುತ್ತಮ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.

ಸಿಎಸ್‌ಆರ್ ಕಾರ್ಯಕ್ರಮದಲ್ಲಿ ಇಂದು ಇಬ್ಬರು ಬಾಲಕಿಯರನ್ನು ವಿಜಯಾ ಬ್ಯಾಂಕ್ ದತ್ತು ಪಡೆದಿದೆ. ಬಡ ಕುಟುಂಬದಿಂದ ಬಂದ 9ನೇ ತರಗತಿಯಲ್ಲಿ ಕಲಿಯುತ್ತಿರುವ ಜಯರಾಮ ಶೇರಿಗಾರ್ ಎಂಬವರ ಮಗಳು ಅಕ್ಷತಾ ಹಾಗೂ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಮಹೇಶ್ ಆಚಾರಿ ಎಂಬವರ ಪುತ್ರಿ ಮೇಘ ಅವರನ್ನು ಇಂದು ಬ್ಯಾಂಕ್ ಪರವಾಗಿ ದತ್ತು ಪಡೆಯಲಾಯಿತು. ಪದವಿವರೆಗಿನ ಇವರ ಸಂಪೂರ್ಣ ಖರ್ಚುವೆಚ್ಚವನ್ನು ಬ್ಯಾಂಕ್ ಭರಿಸಲಿದೆ ಎಂದು ರಾಮರಾವ್ ಘೋಷಿಸಿದರು.

ಉಡುಪಿ ವಲಯದಲ್ಲಿ ಬ್ಯಾಂಕ್ ಈವರೆಗೆ 55 ಮಂದಿ ಬಾಲಕಿಯರನ್ನು ದತ್ತು ಪಡೆದಿದೆ. ದೇಶದಲ್ಲಿ ಸಿಎಸ್‌ಆರ್ ಕಾರ್ಯಕ್ರಮದಡಿ ಬ್ಯಾಂಕ್ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ದತ್ತು ಪಡೆದಿದೆ ಎಂದವರು ತಿಳಿಸಿದರು.

ಉಡುಪಿ ಪ್ರಧಾನ ಶಾಖೆಯ ಎಜಿಎಂ ವಿಜಯ ಪಿ.ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ ವಲಯ ಕಚೇರಿಯ ಪ್ರಾದೇಶಿಕ ಮ್ಯಾನೇಜರ್, ಡಿಜಿಎಂ ಎಂ.ಜೆ.ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರು.ದೀಪ್ತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News