×
Ad

ಮ್ಯಾಜಿಸ್ಟ್ರೇಟ್‌ ಉಣ್ಣಿಕೃಷ್ಣನ್‌ ಸಾವು ಪ್ರಕರಣ: ಜಿಲ್ಲಾ ಸೆಶನ್ಸ್ ನ್ಯಾಯಾಧೀಶರ ಹೇಳಿಕೆ ದಾಖಲಿಸಲು ಅನುಮತಿ

Update: 2017-02-27 23:43 IST

ಕಾಸರಗೋಡು, ಫೆ.27: ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ರಾಗಿದ್ದ  ವಿ.ಕೆ. ಉಣ್ಣಿಕೃಷ್ಣನ್‌ರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ   ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಧೀಶರ ಹೇಳಿಕೆ ದಾಖಲಿಸಿಕೊಳ್ಳಲು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿದ್ಯಾನಗರ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಬಾಬು ಪೆರಿಂಙೋತ್‌ ರಿಗೆ  ಕೇರಳ ಹೈಕೋರ್ಟ್ ಅನುಮತಿ ನೀಡಿದೆ. 

ಮ್ಯಾಜಿಸ್ಟ್ರೇಟ್ ಉಣ್ಣಿಕೃಷ್ಣನ್ ನವೆಂಬರ್ 9ರಂದು ಬೆಳಗ್ಗೆ ವಿದ್ಯಾನಗರದಲ್ಲಿರುವ  ಮ್ಯಾಜಿಸ್ಟ್ರೇಟ್  ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ನಡೆಯುವ ಕೆಲವು ದಿನಗಳ ಹಿಂದೆ  ಕೆಲ ನ್ಯಾಯವಾದಿಗಳ ಜೊತೆಗೆ ಸುಳ್ಯಕ್ಕೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಂದ ಹಿಂತಿರುಗುವ ವೇಳೆ ಸುಳ್ಯದಲ್ಲಿ ಉಂಟಾದ ಅಹಿತಕರ ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸರು ಉಣ್ಣಿಕೃಷ್ಣನ್‌ರನ್ನು ಠಾಣೆಗೊಯ್ದು ದೌರ್ಜನ್ಯವೆಸಗಿದ್ದಾರೆಂದೂ ಆರೋಪಿಸಲಾಗಿತ್ತು. ಮಾತ್ರವಲ್ಲದೆ ಅಲ್ಲಿನ ಪೊಲೀಸರು ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.

ಅಲ್ಲಿಂದ ಕಾಸರಗೋಡಿಗೆ  ಹಿಂತಿರುಗಿದ ಉಣ್ಣಿಕೃಷ್ಣನ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತನ್ನ ಮೇಲೆ ಸುಳ್ಯ ಪೊಲೀಸರು ದೌರ್ಜನ್ಯವೆಸಗಿ ದ್ದಾರೆಂದೂ ಆರೋಪಿಸಿ ಅವರು ಕಾಸರಗೋಡು ಪೊಲೀಸರಿಗೂ  ದೂರನ್ನು ನೀಡಿದ್ದರು. ಆಸ್ಪತ್ರೆಯಿಂದ ಬಿಡುಗಡೆಗೊಂಡು ವಿದ್ಯಾನಗರದಲ್ಲಿರುವ  ವಸತಿ ಗೃಹಕ್ಕೆ ಮರಳಿದ್ದ  ಉಣ್ಣಿಕೃಷ್ಣನ್ ನ.9ರಂದು ಬೆಳಗ್ಗೆ ವಸತಿ ಗೃಹದೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಸಿ.ಐ ಬಾಬು ಪೆರಿಂಙೋತ್ ತನಿಖೆ ಕೈಗೆತ್ತಿಕೊಂಡಿದ್ದರು.

ಮ್ಯಾಜಿಸ್ಟ್ರೇಟ್ ಉಣ್ಣಿಕೃಷ್ಣನ್ ಸುಳ್ಯಕ್ಕೆ ಪ್ರವಾಸ ಹೋಗುವ ಮೊದಲು ಅದಕ್ಕೆ ಪೂರ್ವಾನುಮತಿ  ಅನುಮತಿ ಪಡೆದಿದ್ದರೇ ಮತ್ತು ಅವರ ಕುರಿತಾದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಜಿಲ್ಲಾ ಸೆಶನ್ಸ್ ನ್ಯಾಯಾಧೀಶರ ಹೇಳಿಕೆ ದಾಖಲಿಸಬೇಕಾಗಿದೆ ಎಂದೂ ಅದಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಿ.ಐ ಬಾಬು ಪೆರಿಂಙೋತ್ ಕೆಲವು ದಿನಗಳ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅದನ್ನು ಪರಿಶೀಲಿಸಿದ ನ್ಯಾಯಾಲಯ ಅದಕ್ಕೆ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News