ದೆಹಲಿ ಕರ್ನಾಟಕ ಸಂಘದಿಂದ ಬೊಳುವಾರು ಮುಹಮ್ಮದ್ ಕುಂಞಿಗೆ ಸನ್ಮಾನ

Update: 2017-02-27 18:49 GMT

ಹೊಸದಿಲ್ಲಿ, ಫೆ.27: ಕನ್ನಡ ಬರಹಗಾರ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಇತ್ತೀಚೆಗೆ ದೆಹಲಿ ಕರ್ನಾಟಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅವರ ‘ಸ್ವಾತಂತ್ರದ ಓಟ’ ಎಂಬ ಕಾದಂಬರಿಗೆ 2016ರ ಕೇಂದ್ರ ಸಾಹಿ್ಯ ಅಕಾಡಮಿ ಪ್ರಶಸ್ತಿ ನೀಡಿ ಗೌರಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಲು ಹೊಸದಿಲ್ಲಿಗೆ ಬಂದ ಸಂದರ್ಭ ದೆಹಲಿ ಕರ್ನಾಟಕ ಸಂಘವು ಅವರನ್ನು ಸಂಘಕ್ಕೆ ಬರಮಾಡಿ ಕೊಂಡು ಅವರ ಪತ್ನಿ ಜುಬೇದಾ ಸಹಿತ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರವಿಸಿತು. 

ಸಂಘದ ಪದಾಧಿಕಾರಿಗಳೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಬೊಳುವಾರು ತಮ್ಮ ಕಾದಂಬರಿಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.

ಜೊತೆಗೆ ದೇಶದಾದ್ಯಂತ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಆತಂಕಗಳ ಬಗ್ಗೆ ಪ್ರಸ್ತಾಪಿಸುತ್ತಾ, ಹಿಂದೂ ಮತ್ತು ಮುಸ್ಲಿಮರು ಪರಸ್ಪರರನ್ನು ಪ್ರೀತಿಸಿ ಗೌರವಿಸಿ ಸಹಬಾಳ್ವೆ ನಡೆಸುವುದರ ಬದಲಾಗಿ ಒಂದು ರೀತಿಯ ಗೋಡೆ- ಕಂದರ ಏರ್ಪಟ್ಟಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತ ನಾಡಿದ ಅವರು, ಬೊಳುವಾರು ಅವರು ದೆಹಲಿಯಲ್ಲಿದ್ದಾಗ ಸಂಘದ ಜೊತೆಗೆ ಅವರ ಆತ್ಮೀಯ ಒಡನಾಟವನ್ನು ನೆನಪಿಸಿ, ಮುಂದೆ ಕನ್ನಡದ ಸಾರಸತ್ವ ಲೋಕಕ್ಕೆ ಅವರಿಂದ ಇನ್ನಷ್ಟು ಕೃತಿ ಲಭ್ಯವಾಗಲಿ ಎಂದು ಹಾರೈಸಿದರು.

ನಂದಿನಿ ಮಲ್ಯ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಖಾರಾಮ ಉಪ್ಪೂರು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News