×
Ad

ಕಾಶಿಪಟ್ನದಲ್ಲಿ ಮಾರ್ಚ್ 2ರಂದು ಜಾಮಿಅ್ ಬಹ್ರುನ್ನೂರ್ ಮಸೀದಿ ಉದ್ಘಾಟನೆ

Update: 2017-02-28 13:27 IST

ಮೂಡುಬಿದಿರೆ, ಫೆ.28: ಬೆಳ್ತಂಗಡಿ ತಾಲೂಕಿನ ಕಾಶಿಪಟ್ನದಲ್ಲಿರುವ ದಾರುನ್ನೂರು ವಿದ್ಯಾಸಂಸ್ಥೆಯ ಕ್ಯಾಂಪಸ್‌ನಲ್ಲಿ ನಿರ್ಮಾಣಗೊಂಡಿರುವ ಸುಮಾರು 2 ಕೋಟಿ ರೂ. ವೆಚ್ಚದ ಜಾಮಿಅ್ ಬಹ್ರುನ್ನೂರ್ ಮಸೀದಿಯು ಮಾರ್ಚ್ 2ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದಾರುನ್ನೂರು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಮದರ್ ಇಂಡಿಯಾ ಹೇಳಿದರು.

 ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 12 ಎಕರೆ ವಿಶಾವಾದ ದಾರುನ್ನೂರು ಎಜುಕೇಷನ್ ಸೆಂಟರ್‌ನಲ್ಲಿ ಕಲಿಯುತ್ತಿರುವ 125 ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯರ ಅನುಕೂಲಕ್ಕಾಗಿ ನಿರ್ಮಾಣಗೊಂಡಿರುವ ಈ ಮಸೀದಿಯಲ್ಲಿ ಒಂದೇ ಸಮಯಕ್ಕೆ 2500 ಮಂದಿಗೆ ನಮಾಝ್ ನಿರ್ವಹಿಸಬಹುದಾದಷ್ಟು ಸ್ಥಳಾವಕಾಶವಿದ್ದು, ದೇಶ ವಿದೇಶಗಳಲ್ಲಿರುವ ದಾರುನ್ನೂರು ಸಮಿತಿಗಳ ಸಹಕಾರ ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲು ಸಾಧ್ಯವಾಗಿದೆ ಎಂದರು.

ದಾರುನ್ನೂರು ವಿದ್ಯಾಸಂಸ್ಥೆಗೆ 4 ವರ್ಷಗಳ ಹಿಂದೆ ಪಾಣಕ್ಕಾಡ್ ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್‌ರವರು ಚಾಲನೆ ನೀಡಿದ್ದು, ಬಡ, ಅನಾಥ ಮಕ್ಕಳಿಗೆ ಧಾರ್ಮಿಕ ಲೌಕಿಕ ಶಿಕ್ಷಣವನ್ನು ಒಂದೇ ಸೂರಿನಡಿಯಲ್ಲಿ ನೀಡಲಾಗುತ್ತಿದೆ. 12 ವರ್ಷಗಳ ತರಬೇತಿಯಲ್ಲಿ ಕನ್ನಡ, ಇಂಗ್ಲಿಷ್, ಉರ್ದು, ಮಲಯಾಳಂ, ಪಾರ್ಸಿ ಭಾಷೆಗಳಲ್ಲಿ ತರಬೇತಿ ನೀಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಯುವ ವಿಧ್ವಾಂಸರನ್ನು ಸಮಾಜಕ್ಕೆ ನೀಡುವ ಗುರಿಯನ್ನು ಹೊಂದಿದೆ. ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿ ಚೆಮ್ಮಾಡ್ ಇದರ ಪಠ್ಯಕ್ರಮವನ್ನು ಅನುಸರಿಸಿರುವ ಸಂಸ್ಥೆಯು ಮರ್‌ಹೂಂ ಖಾಝಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಅವರಿನ ಕನಸಿನ ಯೋಜನೆಯಾಗಿತ್ತು ಎಂದರು.
 
ದಾರುನ್ನೂರು ವಿದ್ಯಾಸಂಸ್ಥೆಯ ಅಧೀನದಲ್ಲಿ ಇನ್ನಷ್ಟು ವಿದ್ಯಾಕೇಂದ್ರಗಳು ಆರಂಭಗೊಳ್ಳಲಿದ್ದು, ದಾರುನ್ನೂರು ಇಸ್ಲಾಮಿಕ್ ಅಕಾಡಮಿ, ದಾರುನ್ನೂರು ಮಹಿಳಾ ಶರೀಅತ್ ಕಾಲೇಜ್, ದವಾ ಕಾಲೇಜು, ಯತೀಂ ಖಾನಾ, ಹಿಫ್ಲ್ ಕಾಲೇಜು, ಮಹಿಳೆಯರ ಅಧ್ಯಾಪಕಿ ತರಬೇತಿ ಕಾಲೇಜು, ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜು, ಕಲೆ ಮತ್ತು ಕಂಪ್ಯೂಟರ್ ಕಾಲೇಜು, ಮಹಿಳೆಯರ ವಸತಿನಿಲಯದ ಸೌಲಭ್ಯದೊಂದಿಗೆ ಹಲವು ವಿದ್ಯಾಕೇಂದ್ರಗಳು ಅವುಗಳಲ್ಲಿ ಸೇರಿದೆ. ಈ ಎಲ್ಲಾ ವಿದ್ಯಾಸೇವೆಯನ್ನು ಸಮಾಜದಿಂದ ಸಹಾಯಪಡೆದು ನಡೆಸುತ್ತಿದ್ದು, ಇನ್ನಷ್ಟು ಸಮಾಜದ ಮಂದಿಯಿಂದ ಸಹಕಾರ ಬೇಕಿದೆ. ಈಗಾಗಲೇ ದಾರುನ್ನೂರು ರಾಷ್ಟ್ರೀಯ ಸಮಿತಿ ಯುಎಇ, ರಾಷ್ಟ್ರೀಯ ಸಮಿತಿ, ಸೌದಿ ಅರೇಬಿಯಾ ಸಮಿತಿ, ರಕ್ಷಕ ಮತ್ತು ಶಿಕ್ಷಕರ ಸಮಿತಿ, ದಾರುನ್ನೂರು ವಿಚಾರಗೋಷ್ಠಿ ಯುಎಇ, ದಾರುನ್ನೂರು ಯೂತ್ ಟೀಮ್ ಯುಎಇ, ದಾರುನ್ನೂರು ಸುಲ್ತಾನೇಟ್ ಆಫ್ ಒಮನ್, ದಾರುನ್ನೂರು ರಾಷ್ಟ್ರೀಯ ಸಮಿತಿ ಕತಾರ್, ದಾರುನ್ನೂರು ಯೂತ್ ಟೀಂ ಕಾಶಿಪಟ್ನ ಮುಂತಾದ ಸಮಿತಿಗಳು ಸಂಸ್ಥೆಯ ಬೆನ್ನೆಲುಬಾಗಿ ಕಾರ್ಯಾಚರಿಸುತ್ತಿವೆ ಎಂದು ಅವರು ಹೇಳಿದರು. ಬಹ್ರುನ್ನೂರ್ ಮಸೀದಿಯ ಉದ್ಘಾಟನೆಯು ಮಾರ್ಚ್ 2ರಂದು ಅಪರಾಹ್ನ 3ಗಂಟೆಗೆ ನಡೆಯಲಿದ್ದು, ಅಸ್ಸಯ್ಯಿದ್ ಹೈದರ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರು ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರಾದ ಉಪಾಧ್ಯಕ್ಷರಾದ ಶೈಖುನಾ ಅಲ್‌ಹಾಜ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್‌ರವರು ದುಆ ನೆರವೇರಿಸಲಿದ್ದಾರೆ. ದ.ಕ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅರ್ಹರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಲೀಂ ಅಲ್ತಾಫ್ ಫರಂಗಿಪೇಟೆ ಸ್ವಾಗತ ಭಾಷಣ ಮಾಡಲಿದ್ದಾರೆ. ದಾರುನ್ನೂರು ಕಾಶಿಪಟ್ನದ ಅಧ್ಯಕ್ಷ ಯೆನೆಪೋಯ ಹಾಜಿ ವೈ.ಮುಹಮ್ಮದ್ ಕುಂಞಿರವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಶೈಖ್ ಖಾಲಿದ್ ಅಬ್ದುಲ್ ಬಾರಿ ಅಬೂಬಕ್ಕರ್ ಮುಹಮ್ಮದ್ ಅಲ್ ಝುಬೈದಿ ದುಬೈ, ಶೈಖ್ ಅಹ್ಮದ್ ಅಬ್ದುಲ್ ಬಾರಿ ಅಬೂಬಕ್ಕರ್ ಮುಹಮ್ಮದ್ ಅಲ್ ಝುಬೈದಿ ದುಬೈರವರು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ದಾರುನ್ನೂರು ಪ್ರಧಾನ ವ್ಯವಸ್ಥಾಪಕರಾದ ಅಬ್ದುರ್ರಹ್ಮಾನ್ ಹಾಸ್ಕೋ, ಸೂರಲ್ಪಾಡಿ ಹಾಜಿ ನೌಶಾದ್, ಅಬ್ದುರ್ರಹ್ಮಾನ್ ಮೂಡುಬಿದಿರೆ, ಅಹ್ಮದ್ ಹುಸೈನ್ ಗಂಟಾಲ್‌ಕಟ್ಟೆ, ಡಿವೈಟಿ ಅಂಗರಕರ್ಯದ ನಝೀಮುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News