ಪಿಎಫ್‌ಐ ಕೈಕಂಬ ವತಿಯಿಂದ ರಕ್ತದಾನ ಶಿಬಿರ
ಬಂಟ್ವಾಳ, ಫೆ.28: ಪ್ರತಿ ವರ್ಷ ಜಗತ್ತಿನಲ್ಲಿ ಹನ್ನೆರಡು ಬಿಲಿಯನ್ ಯುನಿಟ್ ರಕ್ತಕ್ಕೆ ಬೇಡಿಕೆ ಇರುತ್ತದೆ. ಆದರೆ ಅದರಲ್ಲಿ ಒಂಬತ್ತು ಬಿಲಿಯನ್ ಯುನಿಟ್ ರಕ್ತ ಮಾತ್ರ ಪೋರೈಕೆಯಾಗುತ್ತಿದ್ದು ಇನ್ನುಳಿದ ಮೂರು ಬಿಲಿಯನ್ ಯುನಿಟ್ ರಕ್ತದ ಕೊರತೆಯಿಂದ ಪ್ರತೀ ವರ್ಷ ಸಾವಿರಾರು ಮಂದಿ ಸಾವನ್ನಪ್ಪುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಅಶ್ರಪ್ ಮಾಚಾರ್ ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹತ್ತನೆ ವರ್ಷಾಚರಣೆಯ ಪ್ರಯುಕ್ತ ಪಿಎಫ್‌ಐ ಕೈಕಂಬ ವಲಯದ ವತಿಯಿಂದ, ಮಂಗಳೂರು ತೇಜಸ್ವಿನಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಕೈಕಂಬದ ಪರ್ಲಿಯ ನರ್ಸಿಂಗ್ ಹೋಮ್‌ನಲ್ಲಿ ರವಿವಾರ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಕ್ತದ ಕೊರತೆಯಿಂದ ಉಂಟಾಗುತ್ತಿರುವ ಸಾವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಆ ಮೂಲಕ ಜನರನ್ನು ಸ್ವಯಂ ರಕ್ತದಾನ ಪ್ರೇರೇಪಿಸಬೇಕಿದೆ. ಪಿಎಫ್‌ಐ ಸದಸ್ಯರು ಪ್ರತೀ ಗ್ರಾಮದಲ್ಲಿ ಮೂರು ತಿಂಗಳಿಗೊಮ್ಮೆ ರಕ್ತದಾನ ಶಿಬಿರ ಹಮ್ಮಿಕೊಂಡು ಬ್ಲಡ್ ಬ್ಯಾಂಕ್‌ಗೆ ಗರಿಷ್ಠಮಟ್ಟದಲ್ಲಿ ರಕ್ತ ಪೂರೈಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾರ್ ಅಹ್ಮದ್ ಮಾತನಾಡಿ, ರಕ್ತದಾನ ಶಿಬಿರ ಸಮಾಜದಲ್ಲಿ ಮಾನವೀಯತೆಯನ್ನು ಬೆಸೆಯುವಲ್ಲಿ ಸಹಕಾರಿಯಾಗಿದೆ. ಪಾಪ್ಯುಲರ್ ಫ್ರಂಟ್ ಸಂಘಟನೆ ದೇಶಾದ್ಯಂತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಜನಾರೋಗ್ಯವೇ ರಾಷ್ಟ್ರಶಕ್ತಿ, ಸ್ಕೂಲ್ ಚಲೋ ಸಹಿತ ಮೊದಲಾದ ಜನಕಲ್ಯಾಣ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಪಿಎಫ್‌ಐ ಪರ್ಲಿಯಾ ವಲಯಾಧ್ಯಕ್ಷ ಅಕ್ಬರ್ ಅಲಿ ಪರ್ಲಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಇಬ್ರಾಹೀಂ ಮಜೀದ್ ತುಂಬೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಸಿಕಂದರ್ ಪಾಷ, ಯೆನೆಪೋಯ ಯುನಿವರ್ಸಿಟಿ ಇದರ ಶ್ವಾಸಕೋಶ ವಿಭಾಗದ ಸಹಾಯಕ ಪ್ರೊ. ಡಾ.ಇರ್ಫಾನ್, ಪರ್ಲಿಯಾ ನರ್ಸಿಂಗ್ ಹೋಮ್ ನಿರ್ದೆಶಕ ಮುಹಮ್ಮದ್ ಇಶಾನ್, ಪರ್ಲಿಯಾ ಅರಫ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಸಾಗರ್, ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ವೈದ್ಯ ಡಾ. ಅರ್ನವ್ ಮೊದಲಾದವರು ಭಾಗವಹಿಸಿದ್ದರು. ಶಿಬಿರದಲ್ಲಿ 71 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ರಿಝ್ವೆನ್ ತಲಪಾಡಿ ಸ್ವಾಗತಿಸಿದರು. ರಹಿಮಾನ್ ಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.