ಕೇರಳದಲ್ಲಿ ಗೂಂಡಾ ಬೇಟೆ: 106 ಮಂದಿಯ ಬಂಧನ; 58 ಮಂದಿ ಗೂಂಡಾ ಪಟ್ಟಿಯಲ್ಲಿ
ಕೋಟ್ಟಯಂ,ಫೆ. 28: ರಾಜ್ಯದ ಕಾನೂನುವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ 19 ಪೊಲೀಸ್ ಜಿಲ್ಲೆಗಳಿಂದ ಗೂಂಡಾ ವಿರೋಧಿ ಸ್ಕ್ವಾಡ್ ಒಟ್ಟು 1006 ಮಂದಿಯನ್ನು ಬಂಧಿಸಿದೆ. ಏಳು ಮಂದಿಯ ವಿರುದ್ದ ಕೇರಳದ ಗೂಂಡಾವಿರೋಧಿ ಕಾನೂನಾದ ಕಾಪ್ಪವನ್ನು ಹೇರಲಾಗಿದೆ. ಒಟ್ಟು 58 ಮಂದಿಯನ್ನು ಗೂಂಡಾ ಪಟ್ಟಿಗೆ ಸೇರಿಸಬೇಕೆಂದು ರೇಂಜ್ ಐಜಿಯ ಶಿಫಾರಸಿನ ಮೇರೆಗೆ ಜಿಲ್ಲಾಪೊಲೀಸಧಿಕಾರಿಗಳು ಜಿಲ್ಲಾಮ್ಯಾಜಿಸ್ಟ್ರೇಟ್‌ಗೆ ವರದಿಯನ್ನು ಹಸ್ತಾಂತರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಗೂಂಡಾ ವಿರೋಧಿ ಸ್ಕ್ವಾಡ್‌ನ ಚಟುವಟಿಕೆಗಳನ್ನು ಹೆಚ್ಚು ತೀಕ್ಷ್ಣಗೊಳಿಸಲು ಮತ್ತು ಪಟ್ಟಿಯಲ್ಲಿರುವ ಮತ್ತು ಹೊಸ ಕೇಸುಗಳಲ್ಲಿ ಶಾಮೀಲಾದವರನ್ನು ಬಂಧಿಸಲು ವಿಚಕ್ಷಣ ವಿಭಾಗದ ಮುಖ್ಯಸ್ಥರು ವಲಯ ಐಜಿಗಳಿಗೆ ಬಲವಾದ ಸೂಚನೆ ನೀಡಿದ್ದಾರೆ.
ಈ ತಿಂಗಳು 21ಕ್ಕೆ 2010 ಗೂಂಡಾಗಳನ್ನು ಬಂಧಿಸಬೇಕೆಂದು ಅವರ ಪಟ್ಟಿಯನ್ನು ರಾಜ್ಯದ ವಿಚಕ್ಷಣ ವಿಭಾಗ ರೇಂಜ್ ಐಜಿಗಳಿಗೆ, ಎಸ್ಪಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿತ್ತು. ಅದರಂತೆ ಒಂದುವಾರದಲ್ಲಿ 1006 ಮಂದಿಯನ್ನು ಬಂಧಿಸಲಾಗಿದೆ ಎಂದು ವಿಚಕ್ಷಣ ಡಿಜಿಪಿ ತಿಳಿಸಿದ್ದಾರೆ. ಇವರಲ್ಲಿ ಹೆಚ್ಚಿನವರನ್ನು ಸಿಆರ್‌ಪಿಸಿ 107-110-151-133 ಕಲಂ ಪ್ರಕಾರ ಬಂಧಿಸಲಾಗಿದೆ.
ಗೂಂಡಾ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಆಲಪ್ಪುಝದಿಂದ ಅತಿಹೆಚ್ಚು 336 ಮಂದಿಯನ್ನು ಬಂಧಿಸಲಾಗಿದೆ. ಹತ್ತಿರದ ತೃಶೂರ್ ರೂರಲ್‌ನಿಂದ 268, ಎರ್ನಾಕುಲಂ ರೂರಲ್‌ನಿಂದ 262 ಮಂದಿಯನ್ನು ಹೀಗೆ ರಾಜ್ಯದ ವಿವಿಧೆಡೆಯಿಂದ ಈವರೆಗೆ ಒಟ್ಟು 1006 ಮಂದಿಯನ್ನು ಬಂಧಿಸಲಾಗಿದೆ. ಅನಧಿಕೃತವಾಗಿ ಬಂದೂಕು ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಗೂಂಡಾ ಬೇಟೆಯ ವೇಳೆ ಪೊಲೀಸರ ಸೆರೆಯಾಗಿದ್ದಾರೆಂದು ವರದಿ ತಿಳಿಸಿದೆ.