ಮನಪಾ: ಕಾಮಗಾರಿಯೇ ಆಗದೆ ಪೂರ್ಣಗೊಂಡ ವರದಿ!
ಮಂಗಳೂರು, ಫೆ.28: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2013-14ನೆ ಸಾಲಿನಲ್ಲಿ 3 ಕೋಟಿ ರೂ.ಗಳ ಎಸ್‌ಎಫ್ ಸಿ ವಿಶೇಷ ಅನುದಾನದಲ್ಲಿ ಕಾಮಗಾರಿ ಆಗದೆಯೇ ಪೂರ್ಣಗೊಂಡಿದೆ ಎಂದು ವರದಿ ನೀಡಿರುವುದರಲ್ಲದೆ, ಕಾಮಗಾರಿ ಬಗ್ಗೆ ತೃತೀಯ ಪಾರ್ಟಿಯಿಂದ ವರದಿಯೂ ಸಲ್ಲಿಕೆಯಾಗಿರುವ ಕುರಿತು ಸಾಮಾನ್ಯ ಸಭೆಯಲ್ಲಿಂದು ವಿಪಕ್ಷ ಸದಸ್ಯರ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು.
ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಸ್‌ಎಫ್ ಸಿ ವಿಶೇಷ ಅನುದಾನದ 58 ಕಾಮಗಾರಿಗಳ ಪೈಕಿ 106 ಲಕ್ಷ ರೂ.ಗಳ 19 ಕಾಮಗಾರಿಗಳು ಪೂರ್ಣಗೊಂಡಿದ್ದು, ಮಂಜೂರಾತಿ ನೀಡಲು ಮುಖ್ಯ ಸಚೇತಕ ಶಶಿಧರ ಹೆಗ್ಡೆಯವರು ಕಾರ್ಯಸೂಚಿ ಮಂಡಿಸಿದರು.
ಆದರೆ ವಿಪಕ್ಷ ಸದಸ್ಯರಾದ ಹರೀಶ್‌ರವರು ಆಕ್ಷೇಪಿಸುತ್ತಾ, ಪೂರ್ಣಗೊಂಡಿದೆ ಎಂದು ಹೇಳಲಾದ 19 ಕಾಮಗಾರಿಗಳಲ್ಲಿ 8 ಲಕ್ಷ ರೂ.ಗಳಲ್ಲಿ ದಂಬೆಲ್ ಹೊಳೆ ಬದಿ ರಸ್ತೆ ಅಭಿವೃದ್ಧಿ ಹಾಗೂ 2 ಲಕ್ಷ ರೂ. ವೆಚ್ಚದಲ್ಲಿ ನಾಗಬ್ರಹ್ಮ ಸನ್ನಿಧಿ ಬಳಿ ಚರಂಡಿ ಕಾಮಗಾರಿ ನಡೆದಿರುವುದಾಗಿ ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಅಂತಹ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ವಾದಿಸಿದರು.
ಹಿರಿಯ ಅಧಿಕಾರಿ ಈ ಸಂದರ್ಭ ಪ್ರತಿಕ್ರಿಯಿಸಿ 19 ಕಾಮಗಾರಿಗಳು ನಿರ್ಮಿತಿ ಕೇಂದ್ರದಿಂದ ಪೂರ್ಣಗೊಂಡು ಈ ಬಗ್ಗೆ ತೃತೀಯ ಪಾರ್ಟಿಯಿಂದ ವರದಿಯೂ ಸಲ್ಲಿಕೆಯಾಗಿದೆ ಎಂದು ಉತ್ತರಿಸಿದರು. ಆದರೆ ಆಗದ ಕಾಮಗಾರಿಗೆ ತೃತೀಯ ಪಾರ್ಟಿ ವರದಿ ನೀಡುವುದಾದರೂ ಹೇಗೆ ಎಂದು ವಿಪಕ್ಷ ಸದಸ್ಯರು ಮೇಯರ್‌ರವರನ್ನು ತರಾಟೆಗೈದರು.
ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಅವರು ಮಾತನಾಡಿ, ಹಿಂದಿನ ಮನಪಾ ಆಯುಕ್ತರು ಎಸ್‌ಎಫ್ ಸಿ 58 ಕಾಮಗಾರಿಗಳಲ್ಲಿ 38 ಕಾಮಗಾರಿಗಳು ನಡೆದಿದ್ದು ಅದರಲ್ಲಿ ಹಲವಾರು ಲೋಪದೋಷಗಳಿರುವುದಾಗಿ ಹೇಳಿರುವುದಲ್ಲದೆ, ತೃತೀಯ ಪಾರ್ಟಿಯಿಂದ ಪರಿಶೀಲನೆಯೂ ಆಗಿಲ್ಲ ಎಂಬುದಾಗಿ ಸರಕಾರಕ್ಕೆ ದೂರೊಂದನ್ನು ಸಲ್ಲಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ಆಗುವ ಅಗತ್ಯವಿದೆ ಎಂದು ಆಗ್ರಹಿಸಿದರು.
ಮೇಯರ್ ಹರಿನಾಥ್ ಪ್ರತಿಕ್ರಿಯಿಸಿ, ಹಿಂದಿನ ಆಯುಕ್ತರು ಸಲ್ಲಿಸಿರುವ ದೂರಿನ ಕುರಿತಂತೆ ಸರಕಾರವು ಜಿಲ್ಲಾಧಿಕಾರಿ ಮೂಲಕ ತನಿಖೆಗೆ ಆದೇಶಿಸಿ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿದ್ದಾರೆ. ಸರಕಾರದ ಮೂಲಕ ಈ ಬಗ್ಗೆ ಕ್ರಮ ಆಗಲಿದೆ ಎಂದು ಸದಸ್ಯರನ್ನು ಸಮಾಧಾನಪಡಿಸಲೆತ್ನಿಸಿ, ಕಾರ್ಯಸೂಚಿಯ ಉಳಿದ ವಿಷಯಗಳ ಚರ್ಚೆ ಮುಂದುವರಿಸಲು ಅವಕಾಶ ನೀಡಬೇಕೆಂದು ಕೋರಿದರು.
ಹಾಗಿದ್ದಲ್ಲಿ ಪ್ರಸಕ್ತ ಕಾರ್ಯಸೂಚಿಯನ್ನು ಮುಂದೂಡಬೇಕೆಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದು, ಮೇಯರ್ ಪೀಠದೆದುರು ತೆರಳಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಆಗ ಮೇಯರ್ ಹರಿನಾಥ್ ಪ್ರತಿಕ್ರಿಯಿಸಿ, ಆಗಿರುವ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಬಾಕಿ ಇರುವ ಕಾಮಗಾರಿಗಳನ್ನು ಬದಲಿ ಪ್ರಸ್ತಾವನೆಯೊಂದಿಗೆ ಬಾಕಿ ಉಳಿದಿರುವ ಎಸ್‌ಎ್ಸಿ ನಿಯಲ್ಲಿ ನಡೆಸಲು ಕ್ರಮ ಕೈಗೊಳ್ಳೋಣ ಎಂದು ಸ್ಪಷ್ಟನೆ ನೀಡಿದರು.
ಆದರೆ ಪಟ್ಟು ಸಡಿಲಿಸದ ವಿಪಕ್ಷ ಸದಸ್ಯರು, ಈ ಬಗ್ಗೆ ತನಿಖೆ ಆಗಬೇಕು. ಬಳಿಕವೇ ಕಾಮಗಾರಿಗಳಿಗೆ ಮಂಜೂರಾತಿ ನೀಡಬೇಕು. ಈ ಬಗ್ಗೆ ವಿಪಕ್ಷ ಕಾನೂನು ಪ್ರಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಕಾರ್ಯಸೂಚಿಗೆ ಆಕ್ಷೇಪವನ್ನು ದಾಖಲಿಸುವಂತೆ ಆಗ್ರಹಿಸಿದರು. ಸಭೆಯಲ್ಲಿ ಉಪ ಮೇಯರ್ ಸುಮಿತ್ರ ಕರಿಯ, ಆಯುಕ್ತ ಮುಹಮ್ಮದ್ ನಝೀರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಿಲತಾ, ಲ್ಯಾನ್ಸಿಲೋಟ್ ಪಿಂಟೋ, ಬಶೀರ್ ಅಹ್ಮದ್, ಕವಿತಾ ಸನಿಲ್ ಉಪಸ್ಥಿತರಿದ್ದರು.