ಸೇನಾ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ : ಬಿಜೆಪಿ ಸಂಪೂರ್ಣ ಹೊಣೆ ಹೊತ್ತುಕೊಳ್ಳಬೇಕು, ಎಂದ ಶಿವಸೇನೆ
ಮುಂಬೈ, ಫೆ.28: ಸೇನಾ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಶಿವ ಸೇನೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಕಟುವಾಗಿ ಟೀಕಿಸಿದೆ. ಸರಕಾರದ ವರ್ಚಸ್ಸನ್ನು ಕುಂದಿಸಿದ ಈ ಘಟನೆ ದೇಶದ ಸುರಕ್ಷತೆಗೆ ಸಂಬಂಧ ಪಟ್ಟಿದ್ದರಿಂದ ಅದರ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಹೊರಬೇಕು ಎಂದು ಅದು ಹೇಳಿದೆ.
‘‘ವಿಶ್ವವಿದ್ಯಾನಿಲಯ ಮತ್ತಿತರ ಶಿಕ್ಷಣ ಸಂಸ್ಥೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿದ್ದವು. ಈಗ ಸೇನಾ ನೇಮಕಾತಿ ಪ್ರಶ್ನೆ ಪತ್ರಿಕೆಗಳೂ ಸುರಕ್ಷಿತವಲ್ಲ. ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವಂತಹ ಈ ಸಮಯದಲ್ಲಿ ಈ ಘಟನೆ ಸರಕಾರದ ಘನತೆಗೆ ಕುಂದು ತಂದಿದೆ,’’ ಎಂದು ಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ತಿಳಿಸಿದೆ.
‘‘ಮನೋಹರ್ ಪಾರಿಕ್ಕರ್ ಅವರಿಗೆ ಮತ್ತೆ ಗೋವಾದ ಮುಖ್ಯಮಂತ್ರಿಯಾಗುವ ಆಸೆ. ಇದೇ ಕಾರಣದಿಂದ ಅವರು ರಕ್ಷಣಾ ಸಚಿವಾಲಯವನ್ನು ಪಣಜಿಯಲ್ಲಿ ಕುಳಿತು ನಿರ್ವಹಿಸುತ್ತಿದ್ದಾರೆ. ಆದರೆ ರಕ್ಷಣಾ ಸಚಿವರ ಹುದ್ದೆಯಲ್ಲಿರುವ ತನಕ ಅವರು ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು,’’ಎಂದು ಶಿವಸೇನೆ ಹೇಳಿಕೊಂಡಿದೆ.
‘‘ಪ್ರಧಾನಿ ರಾಷ್ಟ್ರಭಕ್ತಿ ಮತ್ತು ತ್ಯಾಗದ ಬಗ್ಗೆ ಮಾತನಾಡುತ್ತಾರೆಯೇ ವಿನಹ ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುತ್ತಿಲ್ಲ. ನೋಟು ನಿಷೇಧದ ಹಿಂದೆ ರಾಷ್ಟ್ರಭಕ್ತಿಯಿದೆಯೆಂದಾದರೆ ಸೇನಾ ನೇಮಕಾತಿ ವಿಚಾರದಲ್ಲೂ ಹಾಗಿರಲೇಬೇಕು,’’ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಫೆಬ್ರವರಿ 26ರಂದು ನಡೆಯಬೇಕಾಗಿದ್ದ ಸೇನಾ ನೇಮಕಾತಿ ಪರೀಕ್ಷೆಗಳನ್ನು ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈಗಾಗಲೇ ಈ ಸಂಬಂಧ 21 ಮಂದಿಯನ್ನು ಬಂಧಿಸಲಾಗಿದೆ.